ಮಂಗಳೂರು: ಭಾರಿ ಮಳೆಗೆ ಮನೆಗಳ ಮೇಲೆ ಗುಡ್ಡ ಕುಸಿತ, ಬಾಲಕಿ ಸಾವು, ಐವರ ರಕ್ಷಣೆಗೆ ಕಾರ್ಯಾಚರಣೆ

0
955

ಮಂಗಳೂರು: ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಉಳ್ಳಾಲ ತಾಲೂಕಿನ ಎರಡು ಕಡೆ ಎರಡು ಮನೆಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಮೋಂಟೆಪದವು ಬಳಿ ಐವರು ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಆ ಪೈಕಿ ಇಬ್ಬರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ, ದೇರಳೆಕಟ್ಟೆಯಲ್ಲಿ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದು ಫಾತಿಮಾ ನಯೀಮ (6) ಎನ್ನುವ ಮಗು ಮೃತಪಟ್ಟಿದೆ. ಮೊದಲಿಗೆ ಗಂಭೀರ ಸ್ಥಿತಿಯಲ್ಲಿದ್ದ ಫಾತಿಮಾ ನಯೀಮಳನ್ನು ರಕ್ಷಣೆ ಮಾಡಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ.

ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಣೆ ಮಾಡಿದ್ದರು. ಸದ್ಯ ಮೋಂಟೆಪದವು ಬಳಿ ಮೂವರ ರಕ್ಷಣೆಗಾಗಿ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಭಾರಿ ಮಳೆಯ ಪರಿಣಾಮ ಮಂಗಳೂರು ಸುತ್ತಮುತ್ತಲಿನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾ‌ರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಜಲಾವೃತವಾಗಿವೆ.

50ಕ್ಕೂ ಕಲ್ಲಾಪುವಿನಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನೆರೆಯಿಂದ ಸಮಸ್ಯೆಯಾಗಿದೆ. ತಲಪಾಡಿಯಲ್ಲಿ ಒಂದು ಮನೆಗೆ ನೀರು ನುಗ್ಗಿ ತೀವ್ರ ಹಾನಿಯಾಗಿದ್ದು, ರಾತ್ರಿಯೇ ಸಂತ್ರಸ್ತ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್, ಸೋಮೇಶ್ವರ ಪಟ್ಟಣ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಗ್ರಾಮ ಲೆಕ್ಕಿಗ ಸುರೇಶ್, ಮತ್ತಿತರ ಅಧಿಕಾರಿಗಳು ರಾತ್ರಿ ವೇಳೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲೆಗಳಿಗೆ ಇಂದು ರಜೆ

ಮುನ್ನೆಚ್ಚರಿಕಾ ಕ್ರಮವಾಗಿ ಇಂದು (ಮೇ 30) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆ ಸೇರಿದಂತೆ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಜೂನ್​ 2ರವರೆಗೂ ಭಾರಿ ಮಳೆಯಾಗಲಿದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here