ಮಂಗಳೂರು : ಪ್ರಮೋದ್ ಸಪ್ರೆ ಅವರಿಗೆ “ನಾದಭೂಷಣ” ಪ್ರಶಸ್ತಿ

0
103

ತುಳು ವರ್ಲ್ಡ್ ಫೌಂಡೇಶನ್ ಪ್ರಧಾನ ಸಂಚಾಲಕರಿಗೆ ಸಂಗೀತ ಕ್ಷೇತ್ರದ ಪ್ರತಿಷ್ಠಿತ ಗೌರವ.

ಸಂಗೀತ ಲೋಕದಲ್ಲಿ ತಮ್ಮ ವಿಶಿಷ್ಟ ಪ್ರತಿಭೆಯಿಂದ ಅನೇಕ ಭಾಷೆಗಳ ಚಲನಚಿತ್ರಗಳಿಗೆ ಮನಮೋಹಕ ಸಂಗೀತ ನೀಡಿ ಕನ್ನಡ–ತುಳು ಕಲಾರಂಗದಲ್ಲಿ ಗುರುತಿಸಿಕೊಂಡಿರುವ ಪ್ರಮೋದ್ ಸಪ್ರೆ ಅವರಿಗೆ “ನಾದಭೂಷಣ ಪ್ರಶಸ್ತಿ” ಲಭಿಸಿದೆ. ಈ ಗೌರವವನ್ನು ಏಷ್ಯಾ ಅಂತರರಾಷ್ಟ್ರೀಯ ಸಂಸ್ಕೃತಿ ಸಂಶೋಧನಾ ಅಕಾಡೆಮಿ ವತಿಯಿಂದ ನೀಡಿ ಸನ್ಮಾನಿಸಲಾಗಿದೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವೈಭವೋಪೇತ ಸಮಾರಂಭದಲ್ಲಿ, ಪೂಜ್ಯ ಶ್ರೀ ಶ್ರೀ ಡಾ. ಕೃಷ್ಣಮೂರ್ತಿ ಮಹಾಸ್ವಾಮಿಗಳು ಪ್ರಧಾನ ಮಾಡಿದರು, ಸಮಾರಂಭದಲ್ಲಿ ಮಾಜಿ ಶಾಸಕರಾದ ಡಾ. ಕೆ.ಎ. ಮನೋಹರನ್, ರಕ್ಷಣಾ ಇಲಾಖೆಯ ಹಿರಿಯ ವಿಜ್ಞಾನಿ ಡಾ. ಸುಬ್ರಹ್ಮಣ್ಯಂ ಕೆ.ಎಸ್, ಕರ್ನಾಟಕ ವಿದ್ಯುತ್ ನಿಗಮದ ಇಂಜಿನಿಯರ್ ಡಾ. ಆನಂದ್ ಸಿ.ಡಿ, ಉದ್ಯಮಿ ಮತ್ತು ಸಮಾಜಸೇವಕ ಡಾ. ಎ. ಶ್ರೀಧರ್,
ಮತ್ತು ರಾಷ್ಟ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಾ. ವೈಭವ್ ಗುಣ ಶೇಖರ್ ಇವರ ಸಮ್ಮುಖದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಮೋದ್ ಸಪ್ರೆ ಅವರು ತುಳು ವರ್ಲ್ಡ್ ಫೌಂಡೇಶನ್‌ನ ಪ್ರಧಾನ ಸಂಚಾಲಕರಾಗಿ ತುಳುನಾಡಿನ ಕಲೆ, ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿ ವಿಸ್ತರಣೆಗೆ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಬಹುಭಾಷಾ ಚಲನಚಿತ್ರಗಳಿಗೆ ಸಂಗೀತ ನೀಡಿರುವ ಇವರು, ತುಳುನಾಡಿನ ಆಧ್ಯಾತ್ಮಿಕ-ಸಾಂಸ್ಕೃತಿಕ ಸಾಹಿತ್ಯದ ಆಕರ ಗ್ರಂಥ ಮಂದಾರ ರಾಮಾಯಣ ರಚಿಸಿದ ಮಹಾಕವಿ, ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ಮೊಮ್ಮಗ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಬೆಂಗಳೂರು ಮೂಲದ ಐಲೇಸಾ ಸಾಂಸ್ಕೃತಿಕ ಸಂಸ್ಥೆ ನಿರ್ಮಿಸುತ್ತಿರುವ ಅನೇಕ ಹಾಡುಗಳಿಗೆ ಅವರು ಸಂಗೀತ ನಿರ್ದೇಶನ ನೀಡಿ ನವೀನ ಸಂಗೀತ ಶೈಲಿಯನ್ನು ಆವಿಷ್ಕರಿಸುತ್ತಿದ್ದಾರೆ. ಜೊತೆಗೆ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನೀಡಿರುವ “ಕನ್ನಡ ಸೇವಾರತ್ನ” ಬಿರುದನ್ನು ಪಡೆದಿರುವ ಅವರು, ನೂರಾರು ಹಾಡುಗಳಿಗೆ ಸಾಹಿತ್ಯ ಬರೆದು ಮಂದಾರರ ಪರಂಪರೆಯ ದಾರಿಯಲ್ಲಿ ಸಾಗುತ್ತಿರುವುದು ಕಲಾರಂಗದ ಸಾಕ್ಷಿಯಾಗಿದೆ.


ತುಳುನಾಡಿನ ಗೌರವಗೀತೆ “ಜಯ ಜಯ ತುಳುವ ಸೀಮೆ ಅಪ್ಪೆನಾಡ್” ಇದರ ೧೨೫ನೇ ವರ್ಷದ ಸ್ಮರಣಾರ್ಥವಾಗಿ ಅವರು ತುಳುನಾಡ ಗೀತಾ ಅಭಿಯಾನವನ್ನು ಪ್ರಾರಂಭಿಸಿ ತುಳುವಿನ ಗೌರವವನ್ನು ರಾಜ್ಯ ಮತ್ತು ರಾಷ್ಟ್ರದ ಮಟ್ಟದಲ್ಲಿ ಹರಡಲು ಶ್ರಮಿಸುತ್ತಿದ್ದಾರೆ. ತುಳು ವರ್ಲ್ಡ್ ಫೌಂಡೇಶನ್, ಪ್ರಮೋದ್ ಸಪ್ರೆ ಅವರ ಈ ಸಾಧನೆಗೆ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ದೇಶದಾದ್ಯಂತ ಇರುವ ಸಂಗೀತಗಾರರು, ಸಾಹಿತಿಗಳು, ಕಲಾವಿದರು ಮತ್ತು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಅವರಿಗೆ ಲಭಿಸಿದೆ.
ಅವರ ಕಲಾಯಾತ್ರೆ ಇನ್ನೂ ಹೆಚ್ಚಿನ ಎತ್ತರಗಳನ್ನು ತಲುಪಲಿ ಎಂಬ ಆಶಯ ಎಲ್ಲರಲ್ಲೂ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here