ಕೊಣಾಜೆ : ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸಂಘರ್ಷದಿಂದ ಕಥೆಗಳು ಹುಟ್ಟುತ್ತವೆ. ಸಾಮಾಜಿಕ ಅಸಮಾನತೆ, ವೈಷಮ್ಯ, ಕೌಟುಂಬಿಕ ಕಲಹ, ಧಾರ್ಮಿಕ ಡಾಂಭಿಕತೆ ಮೊದಲಾದವುಗಳನ್ನು ವಸ್ತುವಾಗುಳ್ಳ ಕತೆಗಳನ್ನು ಸುಂದರವಾಗಿ ಹೆಣೆದಿರುವ ಕಥೆಗಳು ರಾಜಶ್ರೀ ಟಿ ರೈ ಪೆರ್ಲ ಅವರ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಸಂಕಲನದಲ್ಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ನಾಗಪ್ಪ ಗೌಡ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ರಾಜಶ್ರೀ ಟಿ ರೈ ಪೆರ್ಲ ಅವರ ನೀ ಮಾಯೆಯೋಳಗೋ ನಿನ್ನೊಳು ಮಾಯೆಯೋ” ಕಥಾ ಸಂಕಲನವನ್ನು ಬುಧವಾರ ಎಸ್ ವಿಪಿ ಅಧ್ಯಯನ ಸಂಸ್ಥೆಯ ಪ್ರೊ.ವಿವೇಕ ರೈ ವಿಚಾರ ವೇದಿಕೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಅವರು ಕೃತಿಯ ಕುರಿತು ಮಾತನಾಡಿ, ಕನ್ನಡ ಕಥಾಸಾಹಿತ್ಯದ ಇತಿಹಾಸ ಬಹಳ ಶ್ರೀಮಂತವಾದುದು. ಲೇಖಕಿ ರಾಜಶ್ರೀ ರೈ ಅವರು ಸಮಾಜದೊಳಗೇ ಇದ್ದು ಸಮಾಜದ ಅನೇಕ ಸೂಕ್ಷ್ಮತೆ ಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಈ ಕೃತಿಯ ಮೂಲಕ ಮಾಡಿದ್ದಾರೆ. ಮಹಿಳೆಯರ ಅಂತರಂಗದ ಅನೇಕ ಸಂಗತಿಗಳಿಗೆ ಸೇರಿದಂತೆ ಇವತ್ತಿನ ಸಮಾಜಕ್ಕೆ ಪೂರಕವಾಗಿ ಅನೇಕ ಹಂದರಗಳು, ಒಳ್ಳೆಯ ಸಂದೇಶಗಳು ಈ ಕೃತಿಯಲ್ಲಿದೆ ಎಂದರು.
ಸಹಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ಮಾತನಾಡಿ, ಜಗತ್ತನ್ನು, ಪರಿಸರವನ್ನು ಸೂಕ್ಷ್ಮವಾಗಿ ನೋಡಬಲ್ಲ ವ್ಯಕ್ತಿಗಳು ಮಾತ್ರ ಸೃಜನಶೀಲರಾಗಿ ಬೆಳೆಯಲು ಸಾಧ್ಯ.ರಾಜಶ್ರೀಯವರಲ್ಲಿ ಸೃಜನಶೀಲ ಬರಹ ಮತ್ತು ಸಂಶೋಧನ ಸಾಮರ್ಥ್ಯ ಮೇಳೈಸಿದೆ ಎಂದರು.
ಉಪನ್ಯಾಸಕ ಡಾ.ಯಶುಕುಮಾರ್ ಅವರು ಮಾತನಾಡಿ, ನಮ್ಮ ಸುತ್ತ ಮುತ್ತದ ಘಟನೆಗಳಿಗೆ ಮೂರ್ತ ಸ್ವರೂಪ ಕೊಡುವುದಕ್ಕೆ ನಾವು ವಿಫಲರಾಗುತ್ತಿದ್ದೇವೆ. ಆದರೆ ಲೇಖಕಿ ರಾಜಶ್ರೀ ಅವರು ಕಥನ ಕಟ್ಟುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ದೈವಾರಾಧನೆ ಹಾಗೂ ಸಮಾಜದ ಅನೇಕ ಸಂಗತಿಗಳು ಈ ಕೃತಿಯ ಮೂಲಕ ಅನಾವರಣಗೊಂಡಿದೆ ಎಂದರು. ಲೇಖಕಿ ರಾಜಶ್ರೀ ಟಿ ರೈ ಪೆರ್ಲ ಅವರು ಮಾತನಾಡಿದರು. ವಿದ್ಯಾರ್ಥಿ ನಾಯಕ ಅಭಿಷೇಕ್ ವಾಲ್ಮೀಕಿ ಮತ್ತು ಸ್ನೇಹ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪವಿತ್ರಾ ಸ್ವಾಗತಿಸಿದರು. ಸ್ನೇಹ ಕಾರ್ಯಕ್ರಮ ನಿರೂಪಿದರು.
ದೈನಂದಿನ ಅನುಭವಗಳಲ್ಲಿ ಮನಸ್ಸನ್ನು ಕಾಡುವ ಭಾವಗಳನ್ನು, ಪ್ರಶ್ನಿಸಲೇಬೇಕಾದ ವಿಷಯಗಳನ್ನು ನನ್ನ ಕತೆಗಳಲ್ಲಿ ಬಿಂಬಿಸುತ್ತೇನೆ – ರಾಜಶ್ರೀ ಟಿ ರೈ ಪೆರ್ಲ ಲೇಖಕಿ.

