ಮಣಿಪಾಲ: ಕ್ಯಾನ್ಸರ್ ಜಾಗೃತಿ ಸಮ್ಮೇಳನಕ್ಕೆ ಚಾಲನೆ
ಮಂಗಳೂರು: ಮಕ್ಕಳಲ್ಲಿನ ಕ್ಯಾನ್ಸರ್ ಪಿಡುಗು ಜಾಗೃತಿಗಾಗಿ ಕ್ಯಾನ್‍ಕಿಡ್ಸ್ ವತಿಯಿಂದ ಮಣಿಪಾಲದ ಕೆಎಂಸಿ ಆವರಣದಲ್ಲಿ ಫೋಸ್‍ಕಾನ್ ರಾಷ್ಟ್ರೀಯ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಎರಡು ದಿನಗಳ ಸಮ್ಮೇಳನದಲ್ಲಿ ಮಕ್ಕಳ ಕ್ಯಾನ್ಸರ್ ತಜ್ಞರು, ದಾದಿಯರು, ಮಾನಸಿಕ ಸಾಮಾಜಿಕ ಬೆಂಬಲ ತಂಡಗಳು, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಹಲವು ಸ್ವಯಂಸೇವಾ ಸಂಸ್ಥೆಗಳು, ಆರೈಕೆದಾರರು, ಸಂಶೋಧಕರು, ಸಿಎಸ್‍ಆರ್‍ನಾಯಕರು ಮತ್ತ ಕ್ಯಾನ್‍ಕಿಡ್ಸ್ ಪ್ರತಿನಿಧಿಗಳು ಭಾಗವಹಿಸಿದ್ದರು.
ಕ್ಯಾನ್‍ಕಿಡ್ಸ್ ಸ್ಥಾಪಕ ಅಧ್ಯಕ್ಷೆ ಪೂನಂ ಬಗೈ ಸಮ್ಮೇಳನದಲ್ಲಿ ಮಾತನಾಡಿ, “ಬಾಲ್ಯದ ಕ್ಯಾನ್ಸರ್ ಜಯಿಸಲು ಚಿಕಿತ್ಸೆ ಮತ್ತು ಆರೈಕೆಯನ್ನು ಒಗ್ಗೂಡಿಸುವ ಜತೆಗೆ, ಮಕ್ಕಳು ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸಿ, ಧೈರ್ಯ ತುಂಬುವುದು ಅಗತ್ಯ. ಮಕ್ಕಳ ಆಂಕಾಲಜಿ ಕ್ಷೇತ್ರದ ಬೆಳವಣಿಗೆಗಳು, ತಾಂತ್ರಿಕ ಪ್ರಗತಿ, ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸೆಗಳ ಮಾಹಿತಿ, ಕ್ಯಾನ್ಸರ್‍ಪೀಡಿತ ಮಕ್ಕಳಿಗೆ ಬೆಂಬಲ ಮತ್ತು ಮಾನಸಿಕ ಆರೈಕೆಗೆ ಅಗತ್ಯ ಕ್ರಮಗಳು ಮತ್ತಿತರ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡುತ್ತಾರೆ” ಎಂದು ವಿವರಿಸಿದರು. ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮುಂಬೈ ಟಾಟಾ ಸ್ಮಾರಕ ಆಸ್ಪತ್ರೆಯ ಡಾ.ಶ್ರೀಪಾದ್ ಬನಾವಳಿ, ನವದೆಹಲಿ ಗಂಗಾರಾಮ್ ಆಸ್ಪತ್ರೆಯ ಡಾ.ಮಾನಸ್ ಕಲ್ರಾ ಮತ್ತಿತರ ತಜ್ಞರು ಸಮ್ಮೇಳನದಲ್ಲಿ ಮಾರ್ಗದರ್ಶನ ಮಾಡಿದರು. ಶುಕ್ರವಾರ ಕ್ಯಾನ್ಸರ್‍ಪೀಡಿತ ಮಕ್ಕಳ ಪಾಲಕರು ಸಮ್ಮೇಳನದಲ್ಲಿ ಭಾಗವಹಿಸಿ ಉಚಿತವಾಗಿ ವೈದ್ಯಕೀಯ ಸಲಹೆ ಮಾರ್ಗದರ್ಶನ ಪಡೆಯಲು ಅವಕಾಶವಿದೆ ಎಂದು ಪ್ರಕಟಣೆ ಹೇಳಿದೆ.
