ಮಣಿಪಾಲ ಲೈಫ್ ಸೈನ್ಸಸ್ ತಂಡಕ್ಕೆ 2025ರ ರಾಷ್ಟ್ರೀಯ ಬಯೋ ಎಂಟರ್‌ಪ್ರಿನರ್‌ಶಿಪ್ ಚಾಲೆಂಜ್‌ನಲ್ಲಿ ಪ್ರಶಸ್ತಿ

0
73


• ಈ ಪ್ರಶಸ್ತಿಯೊಂದಿಗೆ ರೂ. 2 ಲಕ್ಷ ರೂ. ನಗದು ಬಹುಮಾನವನ್ನು ಅಕ್ಸೆಲ್ ಇಂಡಿಯಾ ಪ್ರಾಯೋಜಿಸಿತು.

ಮಣಿಪಾಲ, ಆ. 30: ವಿಶ್ವ ಮಾನ್ಯತೆ ಪಡೆದ ವಿಶ್ವವಿದ್ಯಾಲಯವಾಗಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಇದರ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್ (ಎಂಎಸ್ಎಲ್ಎಸ್)ನ ಪಿಎಚ್.ಡಿ ವಿದ್ಯಾರ್ಥಿಗಳ ತಂಡವು, ಬೆಂಗಳೂರಿನ ಸಿ-ಕ್ಯಾಂಪ್ (ಸೆಂಟರ್ ಫಾರ್ ಸೆಲ್ಲ್ಯುಲರ್ ಅಂಡ್ ಮೊಲಿಕ್ಯುಲರ್ ಪ್ಲಾಟ್‌ಫಾರ್ಮ್ಸ್) ಆಯೋಜಿಸಿದ್ದ ಪ್ರತಿಷ್ಠಿತ ರಾಷ್ಟ್ರೀಯ ಬಯೋ ಎಂಟರ್‌ಪ್ರಿನರ್‌ಶಿಪ್ ಪ್ರಶಸ್ತಿ 2025ರಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ವಿಜೇತರಾಗಿದ್ದಾರೆ.

ವಿಜೇತ ಓಸ್ಟಿಯೋ ಟೆಕ್ ತಂಡವು ಕು. ಅಂಕಿತಾ ಸುರೇಶ್, ಕು. ಗಾಯತ್ರಿ ಮೆನನ್ ಮತ್ತು ಶ್ರೀ. ಏಂಜಲ್ ಜಿ.ಸಿ. ಅವರನ್ನು ಒಳಗೊಂಡಿತ್ತು. ತಂಡಕ್ಕೆ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಸಹ ಪ್ರಾಧ್ಯಾಪಕ ಡಾ. ಭೀಷಂ ನಾರಾಯಣ ಸಿಂಗ್ ಮಾರ್ಗದರ್ಶನ ಮಾಡಿದರು. ಎಲುಬಿನ ದೋಷ ಮರುಸ್ಥಾಪನೆಯ ಸವಾಲುಗಳನ್ನು ಎದುರಿಸಲು ಪುನರುತ್ಪಾದನೆ, ಜೀವಸಕ್ರಿಯತೆ ಮತ್ತು ಸ್ಥೂಲ ರಚನಾ ಏಕೀಕರಣವನ್ನು ಹೆಚ್ಚಿಸುವ ಮೂಲಕ ಪರಿಹರಿಸಲು ವಿನ್ಯಾಸಗೊಳಿಸಲಾದ, ಅಸ್ಥಿ ಚಿಕಿತ್ಸಾ ಅನ್ವಯಗಳಿಗೆ ಹೊಸ ಬಗೆಯ ಜೀವಸಕ್ರಿಯ ಎಲುಬು ತುಂಬುವ ವಸ್ತುವಿನ ಕುರಿತು ತಂಡದ ನವೀನ ಪ್ರಸ್ತಾವನೆಗಾಗಿ ಅವರನ್ನು ಗೌರವಿಸಲಾಯಿತು.

ಈ ತಂತ್ರಜ್ಞಾನವು ಉತ್ತಮ ಪುನರುತ್ಪಾದನೆ, ಜೀವಸತ್ವ ಚಟುವಟಿಕೆ ಮತ್ತು ರಚನಾತ್ಮಕ ಸಮನ್ವಯವನ್ನು ಒದಗಿಸುತ್ತದೆ. ಈ ಆವಿಷ್ಕಾರಕ್ಕೆ ಈಗಾಗಲೇ ಪೇಟೆಂಟ್ ಲಭಿಸಲು ಅರ್ಜಿ ಸಲ್ಲಿಸಲಾಗಿದೆ ಮತ್ತು ತಂತ್ರಜ್ಞಾನ ವರ್ಗಾವಣೆ/ಸ್ಟಾರ್ಟ್‌ಅಪ್ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ.

ಆಕ್ಸೆಲ್ ಇಂಡಿಯಾ ಪ್ರಾಯೋಜಿತ 2 ಲಕ್ಷ ರೂ. ನಗದು ಬಹುಮಾನವನ್ನು ಬಯೋಕಾನ್ ಲಿಮಿಟೆಡ್‌ನ ಸ್ಥಾಪಕಿ ಹಾಗೂ ಕಾರ್ಯನಿರ್ವಹಣಾ ಅಧ್ಯಕ್ಷೆ ಡಾ. ಕಿರಣ್ ಮಜುಂದಾರ್-ಶಾ ಅವರು ಬೆಂಗಳೂರಿನ ದ ಲಲಿತ್ ಅಶೋಕ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿ ಸನ್ಮಾನಿಸಿದರು. ಈ ಸಾಧನೆ ಟೈಮ್ಸ್ ಆಫ್ ಇಂಡಿಯಾ ಮತ್ತು ಯುವರ್ ಸ್ಟೋರಿ ಸೇರಿದಂತೆ ಪ್ರಮುಖ ಮಾಧ್ಯಮಗಳಲ್ಲಿ ವಿಶೇಷವಾಗಿ ಪ್ರಸ್ತುತವಾಯಿತು, ಇದರಿಂದ ಸಂಶೋಧಕರ ಆವಿಷ್ಕಾರಕ್ಕೂ, ಮಾಹೆಯ ಅನುವಾದಾತ್ಮಕ ಸಂಶೋಧನೆಗೆ ನೀಡಿರುವ ಒತ್ತಿಗೆ ವ್ಯಾಪಕವಾದ ಮೆಚ್ಚುಗೆ ಸಿಕ್ಕಿತು.

ಮಾಹೆಯ ಕುಲಪತಿ ಲೆ.ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಬಹುಮಾನ ಪಡೆದ ಸಂಶೋಧಕರನ್ನು ಅಭಿನಂದಿಸಿ ಮಾತನಾಡಿ,
ಈ ಸಾಧನೆ ನಮ್ಮ ಸಂಶೋಧನೆ ಹಾಗೂ ಅನುವಾದಾತ್ಮಕ ಆವಿಷ್ಕಾರಗಳ ಮೂಲಕ ಸಮಾಜದ ಮೇಲೆ ನಿಜವಾದ ಪ್ರಭಾವ ಬೀರುವ ಬದ್ಧತೆಯನ್ನು ತೋರಿಸುತ್ತದೆ. ಯುವ ಸಂಶೋಧಕರಿಗೆ ಸೂಕ್ತ ಪರಿಸರ ಒದಗಿಸುವುದು ನಮ್ಮ ಧ್ಯೇಯ, ಮತ್ತು ನಮ್ಮ ವಿದ್ಯಾರ್ಥಿ-ಬೋಧಕರು ವಿಕಸಿತ ಭಾರತದ ದೃಷ್ಟಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತಿರುವುದು ಹೆಮ್ಮೆ ಎಂದು ಹೇಳಿದರು.

ಆರ್ಥೋಪೆಡಿಕ್ಸ್ ತಜ್ಞರು ಹಾಗೂ ಆರೋಗ್ಯ ವಿಜ್ಞಾನ ಪ್ರೊ ವೈಸ್ ಚಾನ್ಸಲರ್ ಡಾ. ಶರತ್ ರಾವ್ ಮಾತನಾಡಿ,
ಈ ಯಶಸ್ಸು ವೈದ್ಯಕೀಯ ಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರಗಳ ಸೂಕ್ತ ಸಂಯೋಜನೆಯಿಂದ ಪರಿಣಾಮಕಾರಿ ಆರೋಗ್ಯ ಪರಿಹಾರಗಳನ್ನು ರೂಪಿಸಬಹುದು ಎಂಬುದನ್ನು ಸಾಬೀತುಪಡಿಸುತ್ತದೆ. ಮಾಹೆಯ ಯುವ ಮನಸ್ಸುಗಳು ರಾಷ್ಟ್ರ ಮಟ್ಟದಲ್ಲಿ ತಮ್ಮ ಗುರುತು ಮೂಡಿಸುತ್ತಿರುವುದು ಸ್ಪೂರ್ತಿದಾಯಕವಾಗಿದೆ‌ ಎಂದು ಹೇಳಿದರು.

ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ನಿರ್ದೇಶಕ ಡಾ. ಸತೀಶ್ ರಾವ್ ಮಾತನಾಡಿ
ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸ್ ನಲ್ಲಿ ಕುತೂಹಲ, ಸೃಜನಶೀಲತೆ ಮತ್ತು ವೈಜ್ಞಾನಿಕ ಕಠಿಣತೆ ಒಂದೇ ಹಾದಿಯಲ್ಲಿ ಸಾಗುವಂತೆ ನಾವು ಸದಾ ಪ್ರಯತ್ನಿಸಿದ್ದೇವೆ. ಎನ್‌ಬಿಇಸಿ 2025ರಲ್ಲಿ ಈ ಮಾನ್ಯತೆ ದೊರಕಿರುವುದು, ವಿಶ್ವಮಟ್ಟದ ಸೌಲಭ್ಯಗಳು ಮತ್ತು ಶಕ್ತಿಶಾಲಿ ಮಾರ್ಗದರ್ಶನ ಒದಗಿಸಿದಾಗ ನಮ್ಮ ಯುವ ಸಂಶೋಧಕರು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುವ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಸಾಕ್ಷಿ ಹಿಂದೆ ಹೇಳಿದರು.

ಎನ್‌ಬಿಇಸಿ 2025ಕ್ಕೆ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 3,100 ಅರ್ಜಿಗಳು ಬಂದಿದ್ದು, ಅಂತಿಮವಾಗಿ ಕೇವಲ 25 ಫೈನಲಿಸ್ಟ್‌ಗಳನ್ನು (ಸ್ಟಾರ್ಟ್‌ಅಪ್ ಮತ್ತು ವಿದ್ಯಾರ್ಥಿ ವಿಭಾಗ ಸೇರಿ) ಆಯ್ಕೆ ಮಾಡಲಾಯಿತು.

ಈ ಯೋಜನೆಗೆ ಭಾರತ ಸರ್ಕಾರದ ಎಸ್ ಇ ಆರ್ ಬಿ ಮತ್ತು ಡಿ ಬಿ ಟಿ ವತಿಯಿಂದ ಅನುದಾನಿತ ಸಂಶೋಧನಾ ಉಪಕ್ರಮಗಳ ಬೆಂಬಲವಿತ್ತು. ಡಾ. ಭೀಷಂ ನಾರಾಯಣ ಸಿಂಗ್ ಮುಖ್ಯ ಸಂಶೋಧಕರಾಗಿದ್ದು, ಡಾ. ಶ್ಯಾಮಸುಂದರ ಭಟ್ ಸಹ ಸಂಶೋಧಕರಾಗಿದ್ದಾರೆ.

ಈ ಮಹತ್ವದ ಸಾಧನೆಯೊಂದಿಗೆ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಭಾರತದ ವಿಕಸಿತ ಭವಿಷ್ಯಕ್ಕಾಗಿ ಪರಿಣಾಮಕಾರಿ ವೈಜ್ಞಾನಿಕ ಹಾಗೂ ಉದ್ಯಮಶೀಲ ಕೊಡುಗೆಗಳನ್ನು ನೀಡಬಲ್ಲ ಭವಿಷ್ಯದ ನಾಯಕರನ್ನು ಬೆಳೆಸುವ ಕೇಂದ್ರವಾಗಿ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ.

LEAVE A REPLY

Please enter your comment!
Please enter your name here