ಮಾ.7 : ಸಸಿಹಿತ್ಲು ಭಗವತಿಗೆ ಕಲಾಸೌರಭದ ಸ್ವರ ಸಂಗೀತಾಭಿಷೇಕ

0
9

ಮಂಗಳೂರು : ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚಿ 4ರಿಂದ 8ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ವಿವಿಧ ಬಗೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಈ ಸಂದರ್ಭ ಮಾರ್ಚ್ 7ರಂದು ಶನಿವಾರ ಅಪರಾಹ್ನ ಗಂ. 3ರಿಂದ ಕಲಾ ಸೌರಭ ಮುಂಬಯಿ ಆಶ್ರಯದಲ್ಲಿ ‘ಶ್ರೀ ಭಗವತೀ ಅಮ್ಮ – ಸ್ವರ ಸಂಗೀತಾಭಿಷೇಕ’ ಎಂಬ ಭಕ್ತಿ, ಭಾವ-ಜಾನಪದ, ಯಕ್ಷಗಾಯನ ಹಾಗೂ ನೃತ್ಯ ರಂಜನೆಯ ವಿಶಿಷ್ಟ ಜುಗಲ್ಬಂದಿ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ.

ಮುಂಬೈ ಕಲಾ ಸೌರಭದ ರೂವಾರಿ, ಹೆಸರಾಂತ ಸಂಗೀತ ನಿರ್ದೇಶಕ ಮತ್ತು ಗಾಯಕ ಪದ್ಮನಾಭ ಸಸಿಹಿತ್ಲು ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬರಲಿದೆ. ಹಿರಿಯ ಕವಿ, ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಮಗ್ರ ನಿರೂಪಣೆಯಿದ್ದು ಪ್ರಸಿದ್ಧ ಕೀಬೋರ್ಡ್ ವಾದಕ ಸತೀಶ್ ಸುರತ್ಕಲ್ ಮತ್ತು ಸಂಗಡಿಗರು ಹಿನ್ನೆಲೆ ಸಂಗೀತ ಒದಗಿಸುವರು.

ಯಕ್ಷ – ಸಂಗೀತ – ನಾಟ್ಯ ಸಂಗಮ :

‘ಸ್ವರ ಸಂಗೀತಾಭಿಷೇಕ’ ವನ್ನು ಭಕ್ತಿ – ಭಾವ ಗಾನಸುಧೆ, ಜಾನಪದ ಹಾಡು, ತೆಂಕು – ಬಡಗು ಯಕ್ಷ ಸಂಗೀತ ಮತ್ತು ನಾಟ್ಯಗಳ ಮೂಲಕ ವರ್ಣರಂಜಿತವಾಗಿ ಪ್ರಸ್ತುತಪಡಿಸಲಾಗುವುದು. ಇದರಲ್ಲಿ ಪದ್ಮನಾಭ ಸಸಿಹಿತ್ಲು ಮತ್ತು ಅಪೂರ್ವ ಕುಂದಾಪುರ ಶ್ರೀ ಭಗವತಿ ಅಮ್ಮನ ಸ್ತುತಿ ಗೀತೆಗಳನ್ನು ಹಾಡುವರು. ಸತೀಶ್ ಸುರತ್ಕಲ್, ದೀಪಕ್ ರಾಜ್ ಉಳ್ಳಾಲ, ಸಂತೋಷ್ ವಿಟ್ಲ ಮತ್ತು ಸಂತೋಷ್ ಪಾನ ಹಿನ್ನೆಲೆ ಸಂಗೀತ ನೀಡುವರು.

ತೆಂಕುತಿಟ್ಟಿನ ಯುವ ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ ಮತ್ತು ಬಡಗು ತಿಟ್ಟಿನ ಕು. ಇಂಚರ ಶಿವಪುರ ಯಕ್ಷ ಗಾಯನದಲ್ಲಿ ಭಾಗವಹಿಸುವರು. ಶಶಿಕುಮಾರ್ ಆರ್ಚಾರ್ಯ, ರವಿಕುಮಾರ್ ಐಲ ಮತ್ತು ಅನಿರುದ್ಧ ಅತ್ತಾವರ ಯಕ್ಷಗಾನದ ಹಿಮ್ಮೇಳ ನೀಡುವರು. ಪಾತ್ರಧಾರಿಗಳಾಗಿ ಶ್ರೀನಿವಾಸ ಪ್ರಭು ಹಾಗೂ ಕು.ಶಿವಾನಿ ಸುರತ್ಕಲ್ ಯಕ್ಷ ನಾಟ್ಯವನ್ನು ಪ್ರಸ್ತುತಪಡಿಸುವರು.

ಮುಂಬಯಿ ವಿದ್ಯಾವಿಹಾರ್ ನ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್, ಮಯೂರಿ ಫೌಂಡೇಶನಿನ ಸ್ಥಾಪಕರು ಜಯ ಕೆ. ಶೆಟ್ಟಿ, ಸುರಕ್ಷಾ ಕೇಟರರ್ಸ್ ಸುರತ್ಕಲ್ ಮಾಲಕ ಕೇಶವ ಸನಿಲ್, ದಯಾನಂದ ಎಸ್. ಸಸಿಹಿತ್ಲು ಮತ್ತು ಪುಷ್ಪ ದಯಾನಂದ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸುವರು. ಇದೇ ಸಂದರ್ಭದಲ್ಲಿ ಮುಂಬೈನ ಕಲಾಪೋಷಕಿ ದಿ| ದಿವಿಜ ಚಂದ್ರಶೇಖರ ಬೆಲ್ಚಡ ಅವರ ಸಂಸ್ಮರಣೆಯೂ ಜರಗುವುದು.

ಕೃಷ್ಣ ಶೆಟ್ಟಿಗಾ‌ರ್ ಅಂಧೇರಿ ಮುಂಬಯಿ, ರಮೇಶ್ ಸನಿಲ್ ಸಸಿಹಿತ್ಲು, ಸದಾಶಿವ ಪೂಜಾರಿ ದಾದರ್, ಜಯಂತ್ ಶ್ರೀಯಾನ್ ಮುಂಬೈ , ಪದ್ಮನಾಭ ಕೋಟ್ಯಾನ್ ಭಿವಂಡಿ, ಆರ್ಯನ್ ಪ್ರಸಾದ್ ಸುರತ್ಕಲ್ ,ರಮೇಶ್ ರೈ ಪವಾಯಿ ಕಾರ್ಯಕ್ರಮಕ್ಕೆ ಸಹಕರಿಸುವರು.

LEAVE A REPLY

Please enter your comment!
Please enter your name here