ಬೆಂಗಳೂರು: ಸ್ವಾತಂತ್ರ್ಯೋತ್ಸವ ಸಂಭ್ರಮ ದಿನದಂದು ಬೆಂಗಳೂರಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಮನೆಯೊಂದರಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಓರ್ವ ಬಾಲಕ ಸಾವನ್ನಪ್ಪಿದ್ದು, 6 ಜನರಿಗೆ ಗಾಯಗಳಾಗಿರುವಂತಹ ಘಟನೆ ನಗರದ ವಿಲ್ಸನ್ ಗಾರ್ಡನ್ನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿದ್ದ ಮುಬಾರಕ್ (8) ಮೃತ ಬಾಲಕ. ಕಸ್ತೂರಿ (28), ಸರಸಮ್ಮ(50), ಸಬ್ರಿನ್ ಬಾನು(35), ಫಾತಿಮಾ(8) ಸೇರಿ 12 ಜನ ಗಾಯಗಳಿಗೆ ಸಂಜಯ್ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದು ಸಿಲಿಂಡರ್ ಬ್ಲಾಸ್ಟ್ ಅಲ್ಲವೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. 8ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವ ಆಡುಗೋಡಿ ಠಾಣೆ ಪೊಲೀಸರು ಮೇಲ್ನೋಟಕ್ಕೆ ಸಿಲಿಂಡರ್ ಸ್ಟೋಟ ಸಂಭವಿಸಿರಬಹುದು ಎನ್ನತ್ತಿದ್ದಾರೆ.
ಇದೇ ನಗರದ ಸಾಕಷ್ಟು ಜನರು ಬೆಳಗ್ಗೆಯೇ ಲಾಲ್ ಬಾಗ್ನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಒಂದು ವೇಳೆ ಇಂದು ಕೆಲಸಕ್ಕೆ ಹೋಗದೆ ಇದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಸಿಲಿಂಡರ್ ಬ್ಲಾಸ್ಟ್ ಆಗಿರುವ ಸಾಧ್ಯತೆ ಕಡಿಮೆ ಅಂತ ಸ್ಥಳಿಯರು ಹೇಳುತ್ತಿದ್ದು, ತುಂಬಾ ದೊಡ್ಡ ಬ್ಲಾಸ್ಟ್ ಆಗಿದೆ. ಕೆಲವರ ಕೈ ಮತ್ತು ತಲೆ ಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಫೋಟಗೊಂಡಿರುವ ಮನೆ ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

