ಬಂಟ್ವಾಳ:ಜಿಲ್ಲೆಯಲ್ಲಿ ವಿವಿಧ ದೇವಸ್ಥಾನ ಮತ್ತು ದೈವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಎಲ್ಲಾ ಜಾತಿ -ಧರ್ಮಗಳ ಜನತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ಮೂಲಕ ಆರ್ಥಿಕವಾಗಿ ಸ್ವಾಭಿಮಾನಿಗಳನ್ನಾಗಿ ರೂಪಿಸಿ ಸರ್ಕಾರದ ಕೆಲಸಕ್ಕೆ ಪೂರಕವಾಗಿ ನಿಂತು ದೇಶದಲ್ಲೇ ಗುರುತಿಸಿಕೊಂಡ ಧರ್ಮಸ್ಥಳ ಕ್ಷೇತ್ರ ಮತ್ತು ಅಲ್ಲಿನ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಗ್ಗೆ ನಿರಂತರವಾಗಿ ಅವಹೇಳನ ಮತ್ತು ಅಪಪ್ರಚಾರ ನಡೆಸುತ್ತಿರುವ ಧರ್ಮ ವಿರೋಧಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಆಗ್ರಹಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಈ ಬಗ್ಗೆ ಧರ್ಮಸ್ಥಳ ಧರ್ಮ ರಕ್ಷಣಾ ವೇದಿಕೆ ವತಿಯಿಂದ ಆ.20ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಇದೇ ಸಭಾಂಗಣದಲ್ಲಿ ಸುಮಾರು 5 ಸಾವಿರಕ್ಕೂ ಮಿಕ್ಕಿ ಮಂದಿ ಭಾಗವಹಿಸಿ ಜನಾಗ್ರಹ ಸಭೆ ನಡೆಸುವುದರ ಜೊತೆಗೆ ಬಿ.ಸಿ.ರೋಡು ರಾಷ್ಟಿçÃಯ ಹೆದ್ದಾರಿಯಲ್ಲಿ ಬೃಹತ್ ಮೆರವಣಿಗೆ ನಡೆಸಿ ಬಳಿಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಗುವುದು’. ಈ ಜನಾಗ್ರಹ ಸಭೆಯಲ್ಲಿ ಎಲ್ಲಾ ಜಾತಿ ಸಮುದಾಯಗಳ ಮುಖಂಡರು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.
ರೋಟರಿ ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ ಕಾರಂತ್ ಮಾತನಾಡಿ, ‘ ಧರ್ಮಸ್ಥಳ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿರುವ ವ್ಯಕ್ತಿಗಳು ಮತ್ತು ಅನಾಮಿಕ ಮುಸುಕುಧಾರಿಯನ್ನು ಬೆಂಬಲಿಸುತ್ತಿರುವ ವ್ಯಕ್ತಿಗಳ ವಿರುದ್ಧವೂ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ್ ಮಾತನಾಡಿ, ‘ ಹಿಂದೂ ಸಮಾಜದ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಗುರುತಿಸಿಕೊಂಡ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದರು. ಜೈನ್ ಮಿಲನ್ ಸ್ಥಾಪಕಾಧ್ಯಕ್ಷ ಸುದರ್ಶನ್ ಜೈನ್, ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಮತ್ತಿತರರು ಮಾತನಾಡಿ, ‘ಧರ್ಮಸ್ಥಳ ಮತ್ತು ಹೆಗ್ಗಡೆ ಅವರೊಂದಿಗೆ ಜಿಲ್ಲೆಯ ಸಮಸ್ತ ಜನತೆ ಇದೆ ‘ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಂ.ತುಂಗಪ್ಪ ಬಂಗೇರ, ಸುಭಾಶ್ಚಂದ್ರ ಜೈನ್, ವಸಂತ ಮಣಿಹಳ್ಳ, ಪ್ರಭಾಕರ ಪ್ರಭು, ಸುರೇಶ ಕುಲಾಲ್, ರೊನಾಲ್ಡ್ ಡಿಸೋಜ, ಸದಾನಂದ ನಾವೂರು, ಪುರುಷೋತ್ತಮ ಪೂಜಾರಿ ಮಜಲು, ನವೀನ್ ಚಂದ್ರ ಶೆಟ್ಟಿ, ಜಯಕೀರ್ತಿ ಜೈನ್, ಶೇಖರ ಸಾಮಾನಿ, ಜಯಚಂದ್ರ ಬೊಳ್ಮಾರ್ ಮತ್ತಿತರರು ಇದ್ದರು.
