‘
ತುಂಬಾ ವಿಷಮ ಸನ್ನಿವೇಶದಲ್ಲಿ ನಮ್ಮ ದೇಶ ಈಗಿದೆ. ಶತ್ರುಗಳ ಆಕ್ರಮಣ, ಭಯೋತ್ಪಾದಕರ ಆಕ್ರಮಣದಿಂದ ಎಲ್ಲ ಕಡೆಯಲ್ಲೂ ಅಶಾಂತಿ ತಾಂಡವವಾಡ್ತಾ ಇದೆ. ಪರಶುರಾಮ ದುಷ್ಟರ ನಿಗ್ರಹ ಮಾಡಿ ದೇಶವನ್ನ ರಕ್ಷಣೆ ಮಾಡಿದ ಹಾಗೆ ಪರಶುರಾಮ ಜಯಂತಿಯ ದಿವಸ ನಾವೆಲ್ಲರೂ ಪ್ರಾರ್ಥನೆ ಮಾಡಿ ನಮ್ಮ ದೇಶದ ಸೈನಿಕರಿಗೆ ವಿಶಿಷ್ಟವಾದ ಶಕ್ತಿ, ಬಲಗಳನ್ನೂ ಕರುಣಿಸಲಿ, ದೇಶ ದಿಗ್ವಿಜಯವನ್ನು ಸಾಧಿಸುವಂತಾಗಲಿ. ಈ ನಿಟ್ಟಿನಲ್ಲಿ ದೇವರಿಗೆ ಅಕ್ಷಯ ತೃತೀಯದ ದಿವಸ ಅವನಿಗೆ ಸಂತೋಷವಾಗುವಂತಹ ಸ್ವರ್ಣಗಳಿಂದ ತುಲಾಭಾರವನ್ನು ಮಾಡಿದಾಗ ಸಂತುಷ್ಟನಾಗಿ ಭಗವಂತ ವಿಶೇಷವಾದ ಅನುಗ್ರಹ ಮಾಡುತ್ತಾನೆ.
ಆದ್ದರಿಂದ ಅಕ್ಷಯ ತೃತೀಯ ದಿವಸವೇ ದೇವರಿಗೆ ತುಲಾಭಾರದ ಕಾರ್ಯಕ್ರಮವನ್ನ ಭಕ್ತರ ಮೂಲಕ ನಡೆಸುವ ಸಂಕಲ್ಪ ಮಾಡಿದ್ದು. ತುಲಾಭಾರ ಮಾಡುವುದು ಅನಿಷ್ಟಗಳ ನಿವಾರಣೆಗೆ. ಜ್ಯೋತಿಶಾಸ್ತ್ರದಲ್ಲಿ ಅನೇಕ ಅನಿಷ್ಠ ಸನ್ನಿವೇಶಗಳು ಬಂದಾಗ ಗ್ರಹಚಾರ ನಿವಾರಣೆಗಾಗಿ ದೇವರ ಸನ್ನಿಧಾನದಲ್ಲಿ ತುಲಾಭಾರ ಮಾಡುವಂತದ್ದು ಬಳಕೆಯಲ್ಲಿದೆ. ಇವತ್ತು ದೇಶಕ್ಕೆ ಒಳ್ಳೆಯದಾಗಲಿ, ಎಲ್ಲ ಭಕ್ತರಿಗೂ ಒಳಿತಾಗಲಿ ಎನ್ನುವ ಸತ್ಸಂಕಲ್ಪದಿಂದ ದೇವರಿಗೆ ಅತ್ಯಂತ ಪ್ರಿಯವಾಗುವ ಸುವರ್ಣದ ಮೂಲಕ ಕೃಷ್ಣನಿಗೆ ತುಲಾಭಾರದ ಸಮರ್ಪಣೆ ನಡೀತಾ ಇದೆ. ಇನ್ನೊಂದು ರೀತಿಯಲ್ಲಿ ಇಲ್ಲಿ ತುಲಾಭಾರ ಅನ್ನುವುದು ಮುಖ್ಯಪ್ರಾಣ ದೇವರೇ ನಡೆಸೋದು. ನಾವು ಎಲ್ಲವನ್ನು ಕರ್ಮಗಳನ್ನ ದೇವರಿಗೆ ಅರ್ಪಣೆ ಮಾಡುವುದು ಮುಖ್ಯಪ್ರಾಣನ ಮೂಲಕವಾಗಿ. ಭಗವಂತನಿಗೆ ಅತ್ಯಂತ ಪ್ರಿಯರಾದವರು ಮುಖ್ಯಪ್ರಾಣ ದೇವರು. ಹಾಗಾಗಿ ಮುಖ್ಯಪ್ರಾಣ ದೇವರನ್ನು ಮುಂದೆ ಇಟ್ಟುಕೊಂಡು ಅವರ ಮೂಲಕವಾಗಿಯೇ ದೇವರಿಗೆ ಇಂದು ತುಲಾಭಾರದ ಸೇವೆ ಸಮರ್ಪಣೆ ಆಗಿದೆ. ದೇವರು ಸಂತುಷ್ಟನಾಗಿ ಅದನ್ನು ಸ್ವೀಕಾರ ಮಾಡಿಕೊಂಡು ಭಕ್ತರೆಲ್ಲರಿಗೂ ಕೂಡ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ ಅಂತ ಪ್ರಾರ್ಥನೆಯನ್ನ ಮಾಡುತ್ತಿದ್ದೇವೆ ಎಂಬುದಾಗಿ ಪೂಜ್ಯ ಪರ್ಯಾಯ ಶ್ರೀಪಾದರು ಸಂದೇಶವನ್ನ ನೀಡಿದ್ದಾರೆ. ಶ್ರೀಗಳವರ ಈ ಒಂದು ಸಂಕಲ್ಪ ಕಾರ್ಯಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ, ದೇವರ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಭಂಡಾರಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ವಿದ್ಯೇಶತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಕಿರಿಯ ಪಟ್ಟದ ಪರಮ ಪೂಜ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು,ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷವಾದ ಮೆರುಗನ್ನು ನೀಡಿದರು. ಈ ತುಲಾಭಾರದ ಸೇವೆಯ ಹಿನ್ನೆಲೆಯಲ್ಲಿ ಇವತ್ತು ಕೃಷ್ಣನಿಗೂ ಕೂಡ ತುಲಾಭಾರದ ಅಲಂಕಾರದ ಸೇವೆಯನ್ನ ಮಾಡಲಾಗಿತ್ತು.