ಕಾರ್ಕಳ: ಮಿಯ್ಯಾರು ಗ್ರಾಮದ ಕಾರೋಲ್‌ಗುಡ್ಡೆ ಜೋಡುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗರ್ಭಗೃಹಗಳಲ್ಲಿ ಶ್ರೀ ಮಹಾಗಣಪತಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪುನಃಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಮಹೋತ್ಸವವು ಏ. 26ರಿಂದ 30ರವರೆಗೆ ವೈಭವದಿಂದ ನಡೆಯಲಿದೆ.
ಬ್ರಹಶ್ರೀ ಬೆಳ್ಳಣ್ಣು ದೊಡ್ಡಮನೆ ಸರ್ವೇಶ ತಂತ್ರಿಗಳ ಮಾರ್ಗದರ್ಶನ ಹಾಗೂ ವೇದಮೂರ್ತಿ ನಲ್ಲೂರು ಪರಪ್ಪಾಡಿ ರಾಮಕೃಷ್ಣ ಭಟ್ ಅವರ ಸಹಯೋಗದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
ಇದೇ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ನಾಗದೇವರ ಪುನಃಪ್ರತಿಷ್ಠಾಪನೆಯೂ ನಡೆಯಲಿದೆ. ಪಂಚದಿನಗಳ ಈ ಉತ್ಸವವು ಏ. 26ರ ಭಾನುವಾರ ಸಂಜೆ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ಭವ್ಯ ‘ಹಸಿರುವಾಣಿ ಹೊರೆಕಾಣಿಕೆ’ ಮೆರವಣಿಗೆಯೊಂದಿಗೆ ಚಾಲನೆ ಪಡೆಯಲಿದೆ. ದಿನಂಪ್ರತಿ ಗಣಪತಿ ಹೋಮ, ಶಿಖರ ಕಲಶ ಪ್ರತಿಷ್ಠೆ ಅಷ್ಟಬಂಧ ಪ್ರತಿಷ್ಠೆ ಹಾಗೂ ವಿವಿಧ ದೇವರ ಬಿಂಬ ಪ್ರತಿಷ್ಠಾಪನೆಗಳಂತಹ ವಿಶೇಷ ಪೂಜೆಗಳು ನಡೆಯಲಿವೆ.
ಏಪ್ರಿಲ್ 30ರ ಗುರುವಾರ ಶ್ರೀ ನಾಗದೇವರು, ಸುಬ್ರಹ್ಮಣ್ಯ ಮಹಾಗಣಪತಿ ಮತ್ತು ಅಯ್ಯಪ್ಪ ಸ್ವಾಮಿ ದೇವರಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕದೊಂದಿಗೆ ಮಂಗಲಗೊಳ್ಳಲಿದೆ.
ಧಾರ್ಮಿಕ ಸಭೆಗಳಲ್ಲಿ ನಾಡಿನ ಗಣ್ಯರು ಭಾಗವಹಿಸಲಿದ್ದು ಕೇಮಾರು ಸಾಂದೀಪನಿ ಸಾಧನಾ ಆಶ್ರಮದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದಲ್ಲಿ ಶಾಸಕ ವಿ. ಸುನಿಲ್ ಕುಮಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಡಾ. ರವೀಂದ್ರ ಶೆಟ್ಟಿ ಬಜಗೋಳಿ ಹಾಗೂ ಎ. ಜೀವಂಧರ್ ಕುಮಾರ್ ಕೊಡಮಣಿತ್ತಾಯ ಮೊದಲಾದವರು ವಿವಿಧ ದಿನಗಳ ಸಭೆಯ ಅಧ್ಯಕ್ಷತೆ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭೆಯ ಗೌರವ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಖ್ಯಾತ ನ್ಯಾಯವಾದಿ ಮಣಿರಾಜ ಶೆಟ್ಟಿ, ಶ್ರೀಪತಿ ಭಟ್ ಮೂಡಬಿದ್ರೆ, ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ಧನ ರಾವ್ ಇಡ್ಯಾ ಮತ್ತು ಲೋಹಿತಾಶ್ವ ಕೇದಿಗ್ಗೆರೆ ಮೊದಲಾದ ಪ್ರಮುಖರು ಉಪಸ್ಥಿತರಿರಲಿದ್ದಾರೆ. ಐದೂ ದಿನಗಳ ಕಾಲ ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಲೈಸಲಿವೆ. ಬಜಪೆಯ ಥಂಡರ್‌ಗೈಸ್ ಫೌಂಡೇಶನ್‌ನಿಂದ ಕ್ಷೇತ್ರ ಪುರಾಣ ಮಂಜರಿ’ ನೃತ್ಯ ಸಂಗಮ, ಕಾಸರಗೋಡಿನ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯಿಂದ ಸಾಂಸ್ಕೃತಿಕ ವೈಭವ, ಉಮೇಶ್ ಮಿಜಾರ್ ಬಳಗದಿಂದ ‘ತಲಿಕೆದ ಗೊಂಚೆಲ್’ ಹಾಸ್ಯ ವೈವಿಧ್ಯ ಹಾಗೂ ರಮ್ಯ ಸುಧೀಂದ್ರ ಸಾರಥ್ಯದ ‘ಭಕ್ತಿ-ಸುಗಮ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ವಿ. ಎಮ್. ಚಿನ್ನಸ್ವಾಮಿ, ಅಧ್ಯಕ್ಷ ಸಿ. ತಂಗರಾಜ್ ಮತ್ತು ಟ್ರಸ್ಟ್ ಅಧ್ಯಕ್ಷ ಕೆ. ಎಸ್. ವಿಶ್ವನಾಥ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

