ಉಡುಪಿ: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದನ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಲು ಹೆಜಮಾಡಿ ಟೋಲ್ ಗೇಟ್ ಬಳಿ ಕಾರ್ಯಾಚರಣೆ ಮಾಡಿ ದಿಟ್ಟತನದಿಂದ ಓರ್ವ ಆರೋಪಿಯನ್ನು ಬಂಧಿಸಿದ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ್ ಕನಹಟ್ಟಿ, ಪವನ್ ನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ಸಂದೀಪ್ ರವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಗೋ ಕಳ್ಳತನ ಆರೋಪಿಗಳು ಕರ್ತವ್ಯನಿರತ ಪೊಲೀಸರ ಮೇಲೆ ಕಾರನ್ನು ಹತ್ತಿಸಿ ಹತ್ಯೆಗೆ ಯತ್ನ ಮಾಡಿರುವುದು ಅತ್ಯಂತ ಖಂಡನೀಯ. ತಕ್ಷಣ ಪೊಲೀಸ್ ಇಲಾಖೆ ಪರಾರಿಯಾದ ಆರೋಪಿಗಳನ್ನು ತಕ್ಷಣ ಬಂಧಿಸಿ, ಈ ಆರೋಪಿಗಳ ಜಾಲವನ್ನು ಪತ್ತೆಹಚ್ಚಿ ಪರೋಕ್ಷ ಸಹಕಾರ ನೀಡುತ್ತಿರುವ ವ್ಯಕ್ತಿಗಳನ್ನು ಕೂಡ ಬಂಧಿಸಿ ಗೋಕಳ್ಳರ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕಿದೆ.
ಗೋಕಳ್ಳರ ಈ ಕೃತ್ಯದಿಂದ ಜನಸಾಮಾನ್ಯರು ಆತಂಕಗೊಂಡಿದ್ದು, ಕರ್ತವ್ಯ ನಿರತ ಪೊಲೀಸರ ಮೇಲೆಯೇ ಕಾರು ಚಲಾಯಿಸಿ ಹತ್ಯೆಗೆ ಯತ್ನಿಸುವ ಮೂಲಕ ಪೊಲೀಸ್ ಅಧಿಕಾರಿಗಳನ್ನು ಹೆದರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಮ್ ಶಂಕರ್ ರವರು ಅಧಿಕಾರ ಸ್ವೀಕರಿಸಿದ ಬಳಿಕ ಗೋ ಕಳ್ಳತನ ಪ್ರಕರಣಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಿರುವುದು ಶ್ಲಾಘನೀಯ. ಕರ್ತವ್ಯ ನಿರತ ಪೊಲೀಸರ ಹತ್ಯೆಗೆ ಯತ್ನಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳ ಹೆಡೆ ಮುರಿ ಕಟ್ಟುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಆಗ್ರಹಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.