ಬೈಂದೂರು : ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೌರವಾನ್ವಿತ ಮೋಹನ ಮೊಗವೀರರನ್ನು ಬೈಂದೂರು ತಾಲೂಕು ತುಳುವ ಮಹಾಸಭೆ ಸಂಚಾಲಕರಾಗಿ ನೇಮಿಸಲಾಗಿದೆ. ಜನ ಸೇವೆಯನ್ನು ಜನಾರ್ದನ ಸೇವೆಯಾಗಿ ಪರಿಗಣಿಸಿ ಹಲವು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬರುವ ಅವರು, ಹಲವಾರು ಭಾಷೆಗಳ ಮೇಲೆ ಪ್ರಾಬಲ್ಯ ಹೊಂದಿರುವ ಮೌಲ್ಯಯುತ ವ್ಯಕ್ತಿತ್ವ.
ತಮ್ಮ ಕರ್ಮಭೂಮಿಯಾದ ಗುಜ್ಜಾಡಿ–ಬೈಂದೂರಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸಾಮಾಜಿಕ ಸೇವಾ ಯೋಜನೆಗಳು, ಹಾಗೂ ಯುವ ಸಮುದಾಯದ ಜಾಗೃತಿ ಅಭಿಯಾನಗಳಲ್ಲಿ ಮಹತ್ವದ ಪಾತ್ರವಹಿಸಿದ್ದ ಅವರು, ಹಲವು ಸಂಘಟನೆಗಳಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿ “ಬನ್ನಿ ಸಮಾಜಕ್ಕೆ ಬೇಕಾಗಿ ಒಂದಾಗಿ ಹೋರಾಡೋಣ” ಎಂಬ ಸಂದೇಶವನ್ನು ಹರಡಿದ್ದಾರೆ.
ತುಳುವ ಮಹಾಸಭೆ, 1928ರಲ್ಲಿ ಹಿರಿಯ ತಿಲಕವಾದಿ ಎಸ್.ಯು.ಪಣಿಯಾಡಿಯವರ ನೇತೃತ್ವದಲ್ಲಿ ಸ್ಥಾಪನೆಯಾಗಿ, ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ತುಳುವರ ಹಕ್ಕುಗಳ ಪರಿರಕ್ಷಣೆಯ ಸಂಕಲ್ಪದೊಂದಿಗೆ ಶತಮಾನೋತ್ಸವದತ್ತ ಪಯಣಿಸುತ್ತಿದೆ. ಈ ಮಹಾಸಭೆ ನೂತನ ಚೇತನದೊಂದಿಗೆ ಪುನಶ್ಚೇತನಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಶ್ರೀ ಮೋಹನ ಮೊಗವೀರ ಅವರ ನೇಮಕತೆಗೆ ಮಹತ್ವದ ಅರ್ಥವಿದೆ.
ಮಹಾಸಭೆಯು ಈಗ ತುಳುನಾಡನ್ ಕಳರಿ (ಸಮರಕಲೆ, ಮರ್ಮ ಚಿಕಿತ್ಸಾ ತರಬೇತಿ), ದೈವ ಆರಾಧನೆಗಳ ಪುನರುಜ್ಜೀವನ, ತುಳುವೇಶ್ವರ ದೇವಾಲಯ ಪುನರ್ ನಿರ್ಮಾಣ, ಭಾಷಾ–ಜಾತಿ–ಮತ ಸೌಹಾರ್ದತೆ, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.
ಬೈಂದೂರು ತಾಲೂಕಿನಲ್ಲಿ ಅವರ ನೇತೃತ್ವದಲ್ಲಿ ತುಳು ಮತ್ತು ಕುಂದಗನ್ನಡ ಭಾಷಾ ಬಾಂಧವ್ಯ, ಸಾಂಸ್ಕೃತಿಕ ಚಟುವಟಿಕೆಗಳ ಪ್ರೋತ್ಸಾಹ, ಹಾಗೂ ಸಮುದಾಯದ ಸಂಘಟಿತ ಬಲವರ್ಧನೆಗೆ ನಿರೀಕ್ಷಿತ ಬೆಳವಣಿಗೆಗಳು ಸಂಭವಿಸಲಿವೆ ಎಂಬ ವಿಶ್ವಾಸವನ್ನು ತುಳುವ ಮಹಾಸಭೆಯ ಕೇಂದ್ರ ಸಮಿತಿ ವ್ಯಕ್ತಪಡಿಸಿದೆ.
ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ತುಳುವ ಸಂಘಟನೆಗಳು ಶ್ರೀ ಮೋಹನ ಮೊಗವೀರ ಅವರ ನೇಮಕಕ್ಕೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿವೆ.