ನವದೆಹಲಿ: ಈ ಬಾರಿಯ ಸಂಸತ್ ಮುಂಗಾರು ಅಧಿವೇಶನ ಜುಲೈ 21ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ. ಮೂರು ತಿಂಗಳಿಗೂ ಹೆಚ್ಚಿನ ವಿರಾಮದ ನಂತರ, ರಾಜ್ಯಸಭೆ ಮತ್ತು ಲೋಕಸಭೆ ಎರಡೂ ಜುಲೈ 21 ರಂದು ಬೆಳಗ್ಗೆ 11 ಗಂಟೆಗೆ ಸಭೆ ಸೇರಲಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಅಧಿವೇಶನದ ದಿನಾಂಕಗಳನ್ನು ಶಿಫಾರಸು ಮಾಡಿದೆ ಎಂದು ರಿಜಿಜು ಹೇಳಿದರು.
ಬಜೆಟ್ ಅಧಿವೇಶನವು ಜನವರಿ 31 ರಂದು ಪ್ರಾರಂಭವಾಗಿ ಏಪ್ರಿಲ್ 4 ರಂದು ಕೊನೆಗೊಂಡಿತು, ಆಗ ಎರಡೂ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಇತ್ತೀಚೆಗೆ ನಡೆದ ಸೇನಾ ಕಾರ್ಯಾಚರಣೆ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕೆಂಬ ವಿರೋಧ ಪಕ್ಷದ ನಾಯಕರ ಬೇಡಿಕೆಯ ಮಧ್ಯೆ ಈ ಘೋಷಣೆ ಬಂದಿದೆ.
ಸಂಸದೀಯ ನಿಯಮಗಳ ಪ್ರಕಾರ ಮಳೆಗಾಲದ ಅಧಿವೇಶನದಲ್ಲಿ ಎಲ್ಲಾ ವಿಷಯಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಹೇಳಿದರು. ಪಹಲ್ಗಾಮ್‌ನಲ್ಲಿ 26 ಮಂದಿ ಅಮಾಯಕರ ಹತ್ಯೆ ನಡೆದಿತ್ತು, ಪಾಕ್ ಉಗ್ರರು ಈ ದಾಳಿ ನಡೆಸಿದ್ದರು. ಇದರ ಪ್ರತೀಕಾರವಾಗಿ ಪಾಕ್ ವಿರುದ್ಧ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು.
ಈ ಘಟನೆಯ ನಂತರ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳು ಉಗ್ರರ ಅಡಗುದಾಣ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ಮಾಡಿತ್ತು. ಈ ವೇಳೆ ಉಗ್ರ ಹಫೀಜ್ ಕುಟುಂಬದ ಸದಸ್ಯರು ಹತರಾಗಿದ್ದರು.
ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಮುಂಗಾರು ಅಧಿವೇಶನ ಕರೆದಿದೆ. ಕೆಲವು ದಿನಗಳ ಹಿಂದಷ್ಟೇ ಇಂಡಿಯಾ ಮೈತ್ರಿಕೂಟವು ಕೂಡಲೇ ಸಂಸತ್ ಅಧಿವೇಶನ ಕರೆಯುವಂತೆ ಕೇಂದ್ರಸರ್ಕಾರಕ್ಕೆ ವಿಪಕ್ಷ ಸಂಸದರ ಸಹಿ ಇರುವ ಪತ್ರವನ್ನು ಕಳುಹಿಸಿತ್ತು.
ಈ ಅಧಿವೇಶನದಲ್ಲಿ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿದ ಕುರಿತು ಚರ್ಚೆ ನಡೆಯಲಿವೆ. ಚರ್ಚೆಯ ನಂತರ ಕೇಂದ್ರ ಸರ್ಕಾರದಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದಲ್ಲಿ ಹಾನಿಯಾಗಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿದೆ.