ಮೂಡುಬಿದಿರೆ ಅಲಂಗಾರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

0
7

ಕಲಿಯುಗದಲ್ಲಿ ಕ್ಷಿಪ್ರ ಫಲ ನೀಡುವ ಶ್ರೀ ಸತ್ಯನಾರಾಯಣ ದೇವರು

ಕಲಿಯುಗದಲ್ಲಿ ನಾಮ ಜಪ,ಭಜನೆ ಸಂಕೀರ್ತನೆಯೇ ಶ್ರೇಷ್ಠ

ಮೂಡುಬಿದಿರೆ : ಸತ್ಯಯುಗದಲ್ಲಿ ನೂರಾರು ಸಾವಿರಾರು ವರ್ಷಗಳ ಕಾಲ ಧ್ಯಾನ ತಪಸ್ಸು ಮಾಡಿ ದೇವರನ್ನು ಓಲೈಸಿಕೊಳ್ಳುತ್ತಿದ್ದರು.ಅಂತಹ ಮಹಾತ್ಮರು ಇಚ್ಛಾ ಮರಣ ಹೊಂದುತ್ತಿದ್ದರು .ನಂತರದ ತ್ರೇತಾಯುಗದಲ್ಲಿ ಯಜ್ಞ ಯಾಗಾದಿಗಳನ್ನು ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದರು. ನಂತರ ದ್ವಾಪರಯುಗದಲ್ಲಿಯೂ ಕೂಡ ದೇವರ ಸಾಕ್ಷಾತ್ಕಾರಕ್ಕೆ ಇದೇ ಯಜ್ಞ ಯಾಗಾದಿಗಳು ಮುಂದುವರಿದವು.ಆದರೆ ಈಗ ಕಲಿಯುಗದಲ್ಲಿ ಮಾತ್ರ ಧ್ಯಾನ ,ತಪಸ್ಸು,ಯಾಗ ಇತ್ಯಾದಿಗಳನ್ನು ಮಾಡಲು ಶಕ್ತಿ, ತಾಳ್ಮೆ ,ವ್ಯವಧಾನದ ಕೊರತೆ ಇದ್ದು ಇಲ್ಲಿ ನಾಮ ಜಪ,ಸಂಕೀರ್ತನೆ,ಭಜನೆಯೇ ಶ್ರೇಷ್ಠವಾಗಿದೆ ಎಂದು ಇಲ್ಲಿನ ಜ್ಯೋತಿಷ್ಯ,ವಾಸ್ತು,ಸಂಖ್ಯಾ ಶಾಸ್ತ್ರ ಸಲಹೆಗಾರರಾದ ರಾಘವೇಂದ್ರ ಭಂಡಾರ್ಕರ್ ಹೇಳಿದರು.

ಇಲ್ಲಿನ ಅಲಂಗಾರು ಶ್ರೀ ಸತ್ಯನಾರಾಯಣ ಕಟ್ಟೆಯಲ್ಲಿ ನೆರವೇರಿದ 51 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಭಾಷಣ ನೀಡಿ ಮಾತನಾಡುತ್ತಾ ಅವರು ಕಲಿಯುಗದಲ್ಲಿ ಕ್ಷಿಪ್ರ ಫಲ ನೀಡಿ ಸತ್ಯತೆಯನ್ನು ಮೆರೆಯುವ ದೇವರು ಶ್ರೀ ಸತ್ಯನಾರಾಯಣ ದೇವರು.ಶ್ರೀ ಸತ್ಯನಾರಾಯಣ ವ್ರತ ಪೂಜೆಗಾಗಿ ತಿಥಿ,ವಾರ,ನಕ್ಷತ್ರ,ಅಮವಾಸ್ಯೆ,ಹುಣ್ಣಿಮೆ,ಬೆಳಿಗ್ಗೆ,ಸಂಜೆ ಇಂತದ್ದೇ ಅಂತ ಇಲ್ಲ, ಯಾವ ಸಂದರ್ಭದಲ್ಲಿಯೂ ಮಾಡಿಕೊಳ್ಳುವಂತ ಆಯ್ಕೆಯನ್ನು ದೇವರೇ ನಮಗೆ ಪ್ರತಿಪಾದಿಸಿದ ಅಭಯ ನುಡಿ ಪುರಾಣದಲ್ಲಿದೆ ಎಂದರು.

ಅಧ್ಯಕ್ಷತೆಯನ್ನು ಉದ್ಯಮಿ ಮುಲ್ಕಾಡು ಗಣೇಶ್ ಪೈ ಅವರು ವಹಿಸಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು 51ನೇ ವರ್ಷದವರೆಗೆ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಹಿನ್ನಲೆಯನ್ನು ವಿವರಿಸಿದರು.

ಅಲಂಗಾರು ಬಡಗು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಮೊಕ್ತೇಸರ ಎಂ ದಯಾನಂದ ಪೈ, ಶ್ರೀ ಕಾಳಿಕಾಂಬಾ ದೇವಸ್ಥಾನದ ಉಮೇಶ್ ಆಚಾರ್,ನಿಶ್ಮಿತಾ ಬಸ್ ಮಾಲೀಕರಾದ ನಾರಾಯಣ ಪಿ.ಎಂ, ದ.ಕ ಜಿಲ್ಲಾ ಮೀನುಗಾರಿಕಾ ನಿಗಮದ ಕಾರ್ಯಾಧ್ಯಕ್ಷರಾದ ಮುರಳೀಧರ ಪಿ ಕೋಟ್ಯಾನ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕೆ ರತ್ನಾಕರ ಜೈನ್,ಉದ್ಯಮಿಗಳಾದ ಪ್ರಸಾದ್ ಭಂಡಾರಿ ಮತ್ತು ನಾರಾಯಣ ಶೆಟ್ಟಿ,ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಪ್ರವೀಣ್ ಭಂಡಾರಿ ಸ್ವಾಗತಿಸಿದರು .ಪ್ರಸಾದ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.ನಂತರ ಕಾರ್ಕಳ ಡೆನ್ನಾನ ಕಲಾವಿದರಿಂದ ತುಳು ನಾಟಕ ಪ್ರದರ್ಶಿಸಲಾಯಿತು.

LEAVE A REPLY

Please enter your comment!
Please enter your name here