ಮೂಡುಬಿದಿರೆ : ಪ್ರೇರಣಾ ಶಾಲೆಯಲ್ಲಿ ಉಚಿತ ನೇತ್ರ ಪರೀಕ್ಷೆ , ಬಿ.ಪಿ. – ರಕ್ತ ಪರೀಕ್ಷೆ ಹಾಗೂ ಚರ್ಮರೋಗ ತಪಾಸಣಾ ಶಿಬಿರ ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ಮೂಡುಬಿದಿರೆ ಇದರ ಆಶ್ರಯದಲ್ಲಿ ಪಾರಾದೀಪ್ ಫಾಸ್ಪೇಟ್ ಲಿಮಿಟೆಡ್ , ಮಂಗಳೂರು ರವರ ( ಎಂ.ಸಿ.ಎಫ್. ಮಂಗಳೂರು ) ಪ್ರಾಯೋಜಕತ್ವದಲ್ಲಿ , ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ , ದೇರಳಕಟ್ಟೆಯ ಸಹಕಾರದಲ್ಲಿ ಉಚಿತ ನೇತ್ರ ಚಿಕಿತ್ಸೆ,ಬಿ.ಪಿ – ರಕ್ತ ಪರೀಕ್ಷೆ ಹಾಗೂ ಚರ್ಮರೋಗ ತಪಾಸಣಾ ಶಿಬಿರವು ಜರುಗಿತು . ಮೂಲ್ಕಿ – ಮೂಡುಬಿದಿರೆಯ ಜನಪ್ರಿಯ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನರು ದೀಪ ಪ್ರಜ್ವಲನೆಯ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ಇಂದು ಲಕ್ಷಾಂತರ ಮಂದಿ ನೇತ್ರ ಸಮಸ್ಯೆ ಯಿಂದಾಗಿ ಬಳಲುತ್ತಿದ್ದಾರೆ . ಪಾರಾದೀಪ್ ಫಾಸ್ಫೇಟ್ ರಂತಹ ಕಂಪೆನಿಗಳು ತಮ್ಮ ಸಿ.ಎಸ್. ಆರ್. ನಿದಿಯನ್ನು , ಇಂತಹ ಸಮಸ್ಯೆಗಳನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸಮಾಜಮುಖಿ ಸೇವೆಯಲ್ಲಿ ಬಳಸಿಕೊಳ್ಳುತ್ತಿರುವುದು ಸ್ವಾಗತಾರ್ಹ . ಪಾರಾದೀಪ್ ಕಂಪೆನಿಯು ಇಂತಹ ಹಲವಾರು ಕಾರ್ಯಕ್ರಮ ನಡೆಸಿ , ದೇಶಕ್ಕೆ ಮಾದರಿಯಾಗಿದ್ದು ಈ ಶಿಬಿರವು ಯಶಸ್ವಿಯಾಗಲಿ ” ಎಂದು ಹಾರೈಸಿದರು.
ಪಾರಾದೀಪ್ ಫಾಸ್ಫೇಟ್ ಲಿಮಿಟೆಡ್ ನ ಜಾಯಿಂಟ್ ಜನರಲ್ ಮೆನೇಜರ್ ಡಾ. ಯೋಗೀಶ್ ರವರು ಸ್ವಾಗತಿಸುತ್ತಾ , ” ಹಿಂದಿನ ಎಂ.ಸಿ.ಎಫ್ ಕಂಪನಿಯು ಇಂದು ಆಡಳಿತಾತ್ಮಕವಾಗಿ ಪಾರಾದೀಪ್ ಕಂಪನಿ ಎಂಬ ಹೆಸರನ್ನು ಹೊಂದಿದೆ . ಪಾರಾದೀಪ್ ಕಂಪನಿಯು ಇಂತಹ ಹಲವಾರು ಶಿಬಿರಗಳ ಮೂಲಕ ಜನಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದೆ . ಸಿ.ಎಸ್.ಆರ್ ನಿಧಿಯ ಮೂಲಕ ಈ ತನಕ 55 ಶಿಬಿರಗಳನ್ನು ನಡೆಸಿ , 20 ಸಾವಿರ ಮಂದಿಯ ನೇತ್ರ ಚಿಕಿತ್ಸೆ ಮಾಡಿಸಿ ಸುಮಾರು 2 ಸಾವಿರ ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ ಸಮಾಜಕ್ಕೆ ನೆರವಾಗಿದೆ . ಈ ಹಿಂದೆ ನಮ್ಮ ಕಂಪನಿಯ ಮೂಲಕ ಪ್ರೇರಣಾ ಶಾಲೆಯ ವಿದ್ಯಾರ್ಥಿನಿಗಳಿಗಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸಿ ಕೊಟ್ಟ ತೃಪ್ತಿ ನಮಗಿದೆ ” ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾರೂರು ರವೀಂದ್ರ ಪೈಯವರು, ” ನಾನು40 ವರ್ಷಗಳ ಹಿಂದೊಮ್ಮೆ ಈ ಶಾಲೆಗೆ ಬಂದಿದ್ದೆ. ಆಗಿನ ಹಾಗೂ ಈಗಿನ ಶಾಲೆಯ ಅಭಿವೃದ್ಧಿ ಸ್ಪಷ್ಟವಾಗಿ ಕಾಣುತ್ತಿದೆ . ಸೇವಾಂಜಲಿ ಎಜುಕೇಷನ್ ಟ್ರಸ್ಟ್ ನವರ ಈ ಸಾಧನೆ ನಮಗೆ ಮಾರ್ಗದರ್ಶನವಾಗಬೇಕು .ಆಡಳಿತ ಮಂಡಳಿಯು ಶಾಲೆಯ ಅಭಿವೃದ್ಧಿಗೆ ಸ್ತುತ್ಯವಾದ ಕರ್ತವ್ಯ ಹೊಂದಿದೆ . ಇಂದಿನ ಶಿಬಿರವು ಯಶಸ್ವಿಯಾಗಲಿ ” ಎಂದು ಹಾರೈಸಿದರು .
ಸಭೆಯ ಆಧ್ಯಕ್ಷತೆ ವಹಿಸಿದ್ದ ಪಾರಾದೀಪ್ ನ ಮಾರಾಟ ವಿಭಾಗದ ಮುಖ್ಯಸ್ಥರಾದ ಎಸ್ . ಗಿರೀಶ್ ರವರು , ” ನಮ್ಮ ಪಾರಾದೀಪ್ ಕಂಪೆನಿಯು ಭಾರತ ದೇಶದ ರಸಗೊಬ್ಬರ ಉತ್ಪಾದನೆಯಲ್ಲಿ ಶೇ 10 ರಷ್ಟು ಪಾಲು ಹೊಂದಿದ್ದು , ದೇಶದಲ್ಲೇ ಪ್ರಮುಖ ಸ್ಥಾನ ಹೊಂದಿದೆ . ನಮ್ಮ ಕಂಪೆನಿಗೆ ಇಂತಹ ಸಮಾಜಮುಖಿ ಸೇವೆ ಮಾಡುವುದು ನಮ್ಮ ಆದ್ಯತೆಯಾಗಿದ್ದು , ಹೆಮ್ಮೆಯ ವಿಚಾರವಾಗಿದೆ . ಇಂದು ಅಸಂಖ್ಯ ಸಂಖ್ಯೆಯಲ್ಲಿ ಬಂದಿರುವ ಫಲಾನುಭವಿಗಳನ್ನು ನೋಡಿ ತುಂಬಾ ಸಂತೋಷವಾಗಿದೆ . ನಮ್ಮ ಸೇವೆಯು ಎಲ್ಲರಿಗೂ ದೊರಕುವಂತಾದರೆ , ನಮ್ಮ ಆಶಯ ಈಡೇರುತ್ತದೆ ” ಎಂದು ನುಡಿದರು .
ಸೇವಾಂಜಲಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ರಾಜೇಶ್ ಬಂಗೇರರು ಧನ್ಯವಾದ ಸಲ್ಲಿಸಿದರು . ಪ್ರೇರಣಾ ಶಾಲೆಯ ಸಂಚಾಲಕರಾದ ಎಂ.ಶಾಂತರಾಮ ಕುಡ್ವ , ಶಾಲಾ ಮುಖ್ಯ ಮಾತಾಜಿಯವರಾದ ವತ್ಸಲಾ ರಾಜೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು . ಪ್ರೇರಣಾ ಶಾಲೆಯ ಮಾತಾಜಿ ಸುಚಿತ್ರಾರವರು ಕಾರ್ಯಕ್ರಮ ನಿರೂಪಿಸಿದರು . ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಪಾರಾದೀಪ್ ನ ಅಶೋಕ ಪ್ರಭು , ಸೇವಾಂಜಲಿ ಎಜುಕೇಷನ್ ಟ್ರಸ್ಟ್ ನ ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್ , ಕಾರ್ಯದರ್ಶಿ ಡಾ. ಕೇಶವ ಹೆಗ್ಡೆ , ಖಜಾಂಚಿ ಎಸ್.ಎನ್ . ಬೋರ್ಕರ್ , ಟ್ರಸ್ಟಿಗಳಾದ ಮಂಜುನಾಥ ಶೆಟ್ಟಿ , ಆನಂದ ಕಾರ್ಲರು ಉಪಸ್ಥಿತರಿದ್ದರು . ಪ್ರೇರಣಾ ಶಾಲೆಯ ಎಲ್ಲಾ ಮಾತಾಜಿ , ಶ್ರೀಮಾನ್ , ವಾಹನ ಚಾಲಕರು ಹಾಗೂ ಸಹಾಯಕ ಸಿಬ್ಬಂದಿಗಳು ಹಾಜರಿದ್ದು , ಶಿಬಿರದ ಯಶಸ್ಸಿಗೆ ಸಹಕರಿಸಿದರು . ಶಾಂತಿ ಮಂತ್ರದ ಮೂಲಕ ಸಭೆಯು ಸಮಾಪ್ತಿಗೊಂಡಿತು . ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ನುರಿತ ಹಾಗೂ ಸುಪ್ರಸಿದ್ಧ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ದಾಖಲೆ ಎನಿಸಬಹುದಾದ 383 ಮಂದಿಯು ಶಿಬಿರದ ಪ್ರಯೋಜನ ಪಡೆದರು.

