ಮೂಡುಬಿದಿರೆ : ಹೈಕೋರ್ಟ್ ತಡೆಯಾಜ್ಞೆಯಿಂದ ಬ್ರೇಕ್ ಬಿದ್ದಿದ್ದ ಮೂಡುಬಿದಿರೆ ಪುರಸಭಾ ಮಾರ್ಕೆಟ್ ಕಟ್ಟಡದ ಕೆಲಸವು ಮತ್ತೆ ಪ್ರಾರಂಭಗೊಂಡಿದೆ.
ಮಾರ್ಕೆಟ್ ನ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕೆಲಸ ಪ್ರಾರಂಭಗೊಂಡು ಮುಕ್ಕಾಲು ಅಂಶ ಆಗುತ್ತಿರುವಾಗಲೇ ಪುರಾತತ್ವ ಇಲಾಖೆಯ ಅನುಮತಿ ಪಡೆಯಲಿಲ್ಲ ಎನ್ನುವ ಕಾರಣದಿಂದ ಕಾಮಗಾರಿ ಮುಂದುವರಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಬಳಿಕ ಹಲವು ಬಾರಿ ಈ ಕುರಿತಾದ ವಿಚಾರಣೆ ನಡೆದು ಕೊನೆಗೂ ಪುರಾತತ್ವ ಇಲಾಖೆ ಅನುಮತಿ ನೀಡಿದ ಬಳಿಕ ಮತ್ತೆ ಕಾಮಗಾರಿ ಮುಂದುವರಿಸುವಂತೆ ಗ್ರೀನ್ ಸಿಗ್ನಲ್ ನೀಡಿದೆ.
ಕಳೆದ ಕೆಲ ವರ್ಷಗಳಲ್ಲಿ ಸ್ಥಗಿತಗೊಂಡಿದ್ದ ಮಾರ್ಕೆಟ್ ಕಟ್ಟಡದ ಕಾಮಗಾರಿ ಮತ್ತೆ ಪ್ರಾರಂಭಗೊಂಡಿದ್ದು ಮಾರ್ಕೆಟ್ ಕಟ್ಟಡದ ವ್ಯಾಪಾರಿಗಳಲ್ಲಿ ಸಂತಸ ಉಂಟು ಮಾಡಿದೆ.
ಹಳೆ ಕಟ್ಟಡದಲ್ಲಿದ್ದ ವ್ಯಾಪಾರಸ್ಥರನ್ನು ಸ್ವರಾಜ್ಯ ಮೈದಾನಕ್ಕೆ ತಾತ್ಕಾಲಿಕ ನೆಲೆಯಲ್ಲಿ ಎಂದು ಸ್ಥಳಾಂತರಗೊಳಿಸಿದ್ದು ಇದೀಗ ಕಟ್ಟಡ ಕೆಲಸ ಪೂರ್ಣಗೊಂಡ ಬಳಿಕ ಮತ್ತೆ ಹೊಸ ಕಟ್ಟಡಕ್ಕೆ ವಾಪಾಸಾಗಲಿದ್ದಾರೆ.
ಕಟ್ಟಡದ ಕಾಮಗಾರಿ ಶೀಘ್ರ ಮುಕ್ತಾಯಗೊಳ್ಳುವ ನಿರೀಕ್ಷೆಯಿದ್ದು ಈ ಹಿಂದಿನ ಸ್ಕೆಚ್ ಪ್ರಕಾರವೇ ನಡೆಯಲಿದೆ ಎಂದು ತಿಳಿದು ಬಂದಿದೆ.