ಮೂಡುಬಿದಿರೆ: ಅಶ್ವಥಪುರದಲ್ಲಿ ಬೃಹತ್‌ ಪ್ರತಿಭಟನೆ: 440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ಕೃಷಿ ಭೂಮಿ ನಾಶ

0
47

ಮೂಡುಬಿದಿರೆ: ಉಡುಪಿ- ಕಾಸರಗೋಡು ನಡುವೆ ಹಾದು ಹೋಗುವ 440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ಸಂಬಂಧಪಟ್ಟಂತೆ ಸ್ಟೆರ್‌ಲೈಟ್ ಕಂಪನಿಯವರು ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೆ, ತೆಂಕಮಿಜಾರು ಗ್ರಾಮದ ಕೃಷಿ ಭೂಮಿಯನ್ನು ನಾಶಪಡಿಸಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮಸ್ಥರು, ಭಾರತೀಯ ಕಿಸಾನ್ ಸಂಘದ ಜಂಟಿಯಾಗಿ ಸಂತ್ರಸ್ತ ಕೃಷಿ ಭಾಸ್ಕರ್ ಶೆಟ್ಟಿ ಅವರ ಜಾಗದಲ್ಲಿ ಪ್ರತಿಭಟನೆ ನಡೆಸಿ, ಕಂಪೆನಿಯ ದೌರ್ಜನ್ಯ ಹಾಗೂ ಸರ್ಕಾರ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಮಾತನಾಡಿ, ಮೂಡುಬಿದಿರೆ ಭಾಗದಲ್ಲಿ ಕೃಷಿಕರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ, ವಿದ್ಯುತ್ ಸಂಪರ್ಕ ಸಹಿತ ವಿವಿಧ ಜನವಿರೋಧಿ ಯೋಜನೆಗಳಿಂದಾಗಿ ರೈತರ ಸಂಕಷ್ಟವನ್ನು ಅನುಭವಿಸುವಂತಾಗಿದೆ. ತಾಲೂಕಿನ ಒಂಬತ್ತು ಗ್ರಾಮಗಳಲ್ಲಿ ಹಾದು ಹೋಗುತ್ತದೆ. ಭಾಸ್ಕರ್ ಶೆಟ್ಟಿ, ಸಂಜೀವ ಗೌಡ, ರಾಜೇಶ್ ಭಂಡಾರಿ, ಮಿಜಾರುಗುತ್ತು ಪ್ರವೀಣ್ ರೈ, ಜಾನ್ ರೆಬೆಲ್ಲೊ, ಜೆಸಿಂತಾ ಸಹಿತ ಹಲವು ಮಂದಿ‌ ಕೃಷಿಕರು ದೌರ್ಜನ್ಯದಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ತಂತಿ ಹೋಗುವ ಪ್ರದೇಶದವರಿಗೆ ನೋಟೀಸ್, ಪರಿಹಾರವಿಲ್ಲ. ರೈತ ವಿರೋಧಿ‌ ನೀತಿಯನ್ನು ಬಿಟ್ಟು ಸರ್ಕಾರ ಇದಕ್ಕೆ ಶೀಘ್ರ ಸ್ಪಂದಿಸದಿದಲ್ಲಿ ಮುಂದೆ ಸಾವಿರಾರು ಸಂಖ್ಯೆಯಲ್ಲಿ ರೈತರನ್ನು ಸೇರಿಸಿ ಉಗ್ರ ಹೋರಾಟ‌ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಸಂತ್ರಸ್ತ ಭಾಸ್ಕರ್ ಶೆಟ್ಟಿ ಮಾತನಾಡಿ, ಪೊಲೀಸ್ ವ್ಯವಸ್ಥೆಯನ್ನು ಪ್ರಯೋಗಿಸಿ ಬಲತ್ಕಾರವಾಗಿ ನಮ್ಮ ಭೂಮಿಯನ್ನು ನಮ್ಮಿಂದ ಕಸಿಯುತ್ತಿದ್ದಾರೆ. ಪೊಲೀಸರು ಬೆದರಿಕೆಯೊಡ್ಡಿ ಸಹಿ ಹಾಕಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿದರು.

ತೆಂಕಮಿಜಾರು ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಸದಸ್ಯ ವಿದ್ಯಾನಂದ ಮಿಜಾರು‌ ದೋಟ ಸುರೇಶ್ ಶೆಟ್ಟಿ,ಪ್ರಮುಖರಾದ ವಸಂತ್ ಭಟ್, ಇರುವೈಲು ದೊಡ್ಡಗುತ್ತು ದಿನೇಶ್ ಶೆಟ್ಟಿ, ಜಾನ್ ರೆಬೆಲ್ಲೊ,‌ಜೆಸಿಂತಾ ಸಹಿತ ಗ್ರಾಮಸ್ಥರು ಭಗವಹಿಸಿದ್ದರು.

LEAVE A REPLY

Please enter your comment!
Please enter your name here