ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಕೆಲಸಕ್ಕೆಂದು ಮುಂಬೈಗೆ ಹೋಗಿದ್ದ ಮಗ ಬರೋಬ್ಬರಿ 36 ವರ್ಷಗಳ ಬಳಿಕ ವಾಪಸ್ ಆಗಿದ್ದು, ಕಾದು ಕುಳಿತ ತಾಯಿಯ ಮಡಿಲು ಸೇರಿದ್ದಾರೆ. ಆ ಮೂಲಕ ತುಳುನಾಡಿನ ಕಾರಣಿಕ ಮಂತ್ರದೇವತೆ ದೈವದ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. ಮಗ ಮನೆಗೆ ಬಂದಿದ್ದರಿಂದ ಕುಟುಂಬಸ್ಥರು ಸಂತಸಗೊಂಡಿದ್ದಾರೆ.
ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದ ಚಂದ್ರಶೇಖರ್, ಕಳೆದ 36 ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದರು. ಸುಮಾರು 7 ತಿಂಗಳು ಪತ್ರದ ಮುಖೇನ ಮನೆಯವರ ಜೊತೆ ಸಂರ್ಪದಲ್ಲಿದ್ದರು. ಆ ಬಳಿಕ ಕುಟುಂಬದವರು ಹಾಗೂ ಪರಿಚಿತರ ಸಂಪರ್ಕಕ್ಕೆ ಸಿಗದೇ ದೂರವಾಗಿದ್ದರು.
ಮರಾಠಿ ಕುಟುಂಬದ ಆಸರೆ
ಕುಟುಂಬಸ್ಥರು ಸೇರಿ ಊರನ್ನು ಮರೆತು ಹೋಗುವಷ್ಟು ಮಾನಸಿಕ ಅನಾರೋಗ್ಯಕ್ಕೆ ಒಳಗಾದ ಚಂದ್ರಶೇಖರ್, ಮುಂಬೈಯ ಮಂದಿರ, ಊರು, ಕೇರಿಗಳಲ್ಲಿ ತಿರುಗಾಡಿಕೊಂಡು 10 ವರ್ಷಗಳನ್ನು ಕಳೆದಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಚಂದ್ರಶೇಖರ್ಗೆ ಮುಂಬೈನಲ್ಲಿ ಬಾಲು ಕಾಂಬ್ಳೆ ಎಂಬ ಮರಾಠಿ ಕುಟುಂಬದ ಆಸರೆ ಸಿಕ್ಕಿದೆ. ಬಾಲು ಕಾಂಬ್ಳೆ ತಮ್ಮ ಮನೆಗೆ ಕರೆದುಕೊಂಡು ಹೋಗಿ ಚಂದ್ರಶೇಖರ್ಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದು, ತಕ್ಕಮಟ್ಟಿಗೆ ಸರಿಯಾಗಿದ್ದರು. ಬಾಲು ಕಾಂಬ್ಳೆ ಅವರ ಹೋಟೆಲ್ನಲ್ಲೇ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ.
ಮಂತ್ರದೇವತೆ ದೈವ ಅಭಯ
ಇತ್ತ ಚಂದ್ರಶೇಖರ್ ಪತ್ತೆಗಾಗಿ ಕುಟುಂಬದವರಿಂದ ಹಲವು ಪ್ರಯತ್ನ ನಡೆದಿತ್ತು. ಹಲವು ಕಡೆ ಹರಕೆಗಳನ್ನು ಹೊತ್ತಿದ್ದರು. ಕೊನೆ ಕೊನೆಗೆ ಚಂದ್ರಶೇಖರ್ ವಾಪಸ್ ಬರುವ ಆಸೆಯನ್ನು ಕುಟುಂಬ ಕೈಬಿಟ್ಟಿದ್ದರು. ಮನೆಯಲ್ಲಿಯೇ ಮಂತ್ರದೇವತೆಯನ್ನು ಆರಾಧಿಸಿಕೊಂಡು ಬಂದಿದ್ದ ಚಂದ್ರಶೇಖರ್ ಕುಟುಂಬಕ್ಕೆ ಕೆಲವು ತಿಂಗಳ ಹಿಂದೆ ಮಂತ್ರದೇವತೆ ದೈವ ಅಭಯ ನೀಡಿತ್ತು. ಮಗ ಬದುಕಿದ್ದು, ಮುಂದೆ ನಡೆಯುವ ದರ್ಶನದಲ್ಲಿ ದೈವದ ಸೇವೆ ಹಿರಿಯ ಮಗನಿಂದಲೇ ನಡೆಯಬೇಕೆಂದು ಎಂದು ದೈವ ನುಡಿದಿತ್ತು. ಆ ಬಳಿಕ ನಡೆದದ್ದೆಲ್ಲಾ ಪವಾಡ.
ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮುಂಬೈಯಲ್ಲಿ ನೆಲೆಸಿದ್ದ ಊರ ವ್ಯಕ್ತಿಯೊಬ್ಬರಿಂದ ಚಂದ್ರಶೇಖರ್ ಬಗ್ಗೆ ಸುಳಿವು ಸಿಕ್ಕಿದೆ. ಆ ಬಳಿಕ ಚಂದ್ರಶೇಖರ್ ಸಂಪರ್ಕಿಸಲು ಊರವರು, ಮುಂಬೈಯಲ್ಲಿ ನೆಲೆಸಿರುವ ಪರಿಚಯಸ್ಥರ ಪ್ರಯತ್ನಿಸಿದ್ದಾರೆ. ಕೊನೆಗೆ ಆಶ್ರಯ ನೀಡಿದ ಕುಟುಂಬದವರ ದೂರವಾಣಿ ಸಂಖ್ಯೆ ಲಭ್ಯವಾಗಿದೆ. ಕೊನೆಗೂ ಮೇ.29ರಂದು ನಡೆದ ದೈವ ದರ್ಶನದ ಮೂರು ದಿನಗಳ ಮೊದಲು ಚಂದ್ರಶೇಖರ್ ಮನೆ ಸೇರಿದ್ದಾರೆ. ಮನೆಗೆ ಬಂದ ಬಳಿಕ ಮಾನಸಿಕ ಅನಾರೋಗ್ಯದಿಂದ ಭಾಗಶಃ ಗುಣಮುಖರಾಗಿದ್ದಾರೆ. ಮಂತ್ರದೇವತೆ ದೈವದ ಕಾರಣಿಕವನ್ನು ಚಂದ್ರಶೇಖರ್ ಕುಟುಂಬ ಕೊಂಡಾಡಿದೆ.