ಮೂಡುಬಿದರೆ: ಹಣ್ಣುಗಳ ಉಪ ಉತ್ಪನ್ನ ಘಟಕದ ಸಂವಾದ

0
26

ಮೂಡುಬಿದರೆ : ಮಂಗಳೂರು ತೋಟಗಾರಿಕಾ ಇಲಾಖೆ, ಮೂಡುಬಿದರೆ ಕೃಷಿ ವಿಚಾರ ವಿನಿಮಯ ಕೇಂದ್ರ ಮತ್ತು ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಜಂಟಿ ಆಶ್ರಯದಲ್ಲಿ ಜುಲೈ 19ರಂದು ಸಮಾಜ ಮಂದಿರದಲ್ಲಿ ಅನಾನಸು ಮತ್ತು ಡ್ರ್ಯಾಗನ್, ಹಣ್ಣುಗಳ ಉಪ ಉತ್ಪನ್ನ ಘಟಕ ಸ್ಥಾಪಿಸುವರೆ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಡಿ ಮಾತನಾಡಿ, ಪ್ರಾಣಿ ಪಕ್ಷಿಗಳು ಮನುಷ್ಯನಿಗಿಂತ ನೂರು ಪಟ್ಟು ಹೆಚ್ಚು ಸೂಕ್ಷ್ಮ ಸಂವೇದಿಗಳಾಗಿದ್ದು ಯಾವುದೇ ಪರಿಸರದ ವಿನಾಶದ ಬಗ್ಗೆ ಮೊದಲೇ ತಿಳಿದಿರುತ್ತವೆ. ತೋಟಗಾರಿಕಾ ಬೆಳೆಗಳನ್ನು ಬೆಳೆಯುವಾಗ ಆಯಾ ಮಣ್ಣಿನ ಗುಣಮಟ್ಟ, ಪೂರಕಾಂಶಗಳನ್ನು ಸಮಗ್ರವಾಗಿ ತಿಳಿದುಕೊಂಡು ಮುಂದುವರಿಯಬೇಕಾಗುತ್ತದೆ ಎಂದು ತಿಳಿಸಿ ತೋಟಗಾರಿಕಾ ಬೆಳೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂವಾದದಲ್ಲಿ ಪ್ರಸ್ತುತಪಡಿಸಿದರು.
ಹಣ್ಣಿನ ಯಾವುದೇ ಉಪ ಉತ್ಪನ್ನಗಳಾದ ಡ್ರೈ ಹಣ್ಣು, ಜ್ಯೂಸ್, ಇತ್ಯಾದಿ ತಯಾರಿಸುವಾಗ ಬಹಳ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಹಾಗೂ ಶೇಖರಣಾ ಜಾಗರೂಕತೆಗಳ ಬಗ್ಗೆ ಮೊದಲೇ ತಿಳುವಳಿಕೆಯನ್ನು ಹೊಂದಿರಬೇಕಾಗುತ್ತದೆ ಎಂದು ವಿವೇಕ್ ಸೋನ್ಸ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಉಪ್ಪಿನಂಗಡಿಯ ಜೆರೋಮ್ ಸಂವಾದದಲ್ಲಿ ಭಾಗವಹಿಸಿ ಸ್ಥಾಪಿಸುವ ಸಂಘಕ್ಕೇ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ನೀಡಿ ಸಹಕಾರಿ ಸಂಘದ ಏಳಿಗೆಗೆ ಒಂದಾಗಿರಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಅಮುಲ್ ನಂತಹ ಸಂಸ್ಕರಣ ಘಟಕವನ್ನು ಅನಾನಸ್ಸು ಹಣ್ಣಿಗಾಗಿ ಸ್ಥಾಪಿಸಿ ಮೂಡುಬಿದಿರೆಯ ಬ್ರ್ಯಾಂಡ್ ಉತ್ಪನ್ನವನ್ನು ಜಗತ್ತಿಗೆ ಪರಿಚಯಿಸುವ ಎಂದು ಕರೆಕೊಟ್ಟರು. ವೇದಿಕೆಯಲ್ಲಿ ರಾಜವರ್ಮ ಹಾಜರಿದ್ದರು.
ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ್ ಕುಮಾರ್ ಸ್ವಾಗತಿಸಿದರು. ಜಿನೇಂದ್ರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ದೀಪಕ್ ವಂದಿಸಿದರು.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here