ತೆಲಂಗಾಣ: ಎರಡು ಅವಳಿ ಕಂದಮ್ಮಗಳ ಕೊಂದು ತಾಯಿಯೊಬ್ಬಳು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. 27 ವರ್ಷದ ಮಹಿಳೆಯೊಬ್ಬಳು ತನ್ನ 2 ವರ್ಷ ಪ್ರಾಯದ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ಸಾವಿಗೆ ಶರಣಾಗಿದ್ದಾಳೆ ತೆಲಗಾಣದ ಬಾಲನಗರದಲ್ಲಿ ನಡೆದಿದೆ.
ತಲೆದಿಂಬನ್ನು ಬಳಸಿ ಮಕ್ಕಳಿಬ್ಬರ ಉಸಿರು ನಿಲ್ಲಿಸಿದ ತಾಯಿ ಬಳಿಕ ತಾನು ವಾಸವಿದ್ದ ಮನೆಯ 4ನೇ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾಳೆ. ಘಟನೆ ನಡೆಯುವ ವೇಳೆ ಆಕೆಯ ಪತಿ ಕೆಲಸದ ಮೇಲೆ ಹೊರಗಡೆ ಹೋಗಿದ್ದರು ಎಂದು ವರದಿಯಾಗಿದೆ.
ಅವಳಿ ಮಕ್ಕಳ ಕೊಂದು ಸಾವಿನ ಹಾದಿ ಹಿಡಿದ ತಾಯಿ
ತಾಯಿ 27 ವರ್ಷದ ಚಲ್ಲರಿ ಸಾಯಿ ಲಕ್ಷ್ಮಿ ತನ್ನ ಅವಳಿ ಮಕ್ಕಳಾದ ಚೇತನ್ ಕಾರ್ತಕೇಯಾ ಹಾಗೂ ಲಾಸ್ಯತಾ ವಲ್ಲಿ ಎಂಬುವವರನ್ನು ಉಸಿರುಕಟ್ಟಿಸಿ ಸಾಯಿಸಿ ಬಳಿಕ ತಾನು ಬದುಕಿಗೆ ಗುಡ್‌ಬಾಯ್ ಹೇಳಿದ್ದಾಳೆ. ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕುಟುಂಬದೊಳಗಿನ ಹೊಡೆದಾಟ ಹಾಗೂ ಒತ್ತಡದಿಂದಾಗಿ ಸಾಯಿಲಕ್ಷ್ಮಿ ಈ ಕೆಟ್ಟ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾಯಿಲಕ್ಷ್ಮಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ಅನಿಲ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆತನನ್ನು ಕಸ್ಟಡಿಗೆ ಪಡೆದಿದ್ದಾರೆ.
ಕಟ್ಟಡದ ಹೊರಗಿದ್ದ ಸಿಸಿಟಿವಿಯಲ್ಲಿ 3.37ರ ಸುಮಾರಿಗೆ ಸಾಯಿಲಕ್ಷ್ಮಿ ಕಟ್ಟಡದಿಂದ ಕೆಳಗೆ ಹಾರಿದ ದೃಶ್ಯ ಸೆರೆಯಾಗಿದೆ. ವಿಚಾರ ತಿಳಿದ ಕೂಡಲೇ ನೆರೆಮನೆಯವರು ಪೊಲೀಸರಿಗೆ ವಿಚಾರ ತಿಳಿಸಿದ್ದು, ನಂತರ ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿ ಅವಳಿ ಮಕ್ಕಳು ನಿರ್ಜೀವವಾಗಿ ಮಲಗಿರುವುದನ್ನು ಕಂಡಿದ್ದಾರೆ. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಮಾತು ಬಾರದ ಮಗನ ಕಾರಣಕ್ಕೆ ದಂಪತಿ ಮಧ್ಯೆ ಕಿತ್ತಾಟ
ಘಟನೆಗೆ ಸಂಬಂಧಿಸಿದಂತೆ ಟಿ ನರಸಿಂಹ ರಾಜು ಅವರು ಮಾಹಿತಿ ನೀಡಿದ್ದು, ಸಾಯಿಲಕ್ಷ್ಮಿ ಹಾಗೂ ಆಕೆಯ ಪತಿ ಅನಿಲ್‌ಕುಮಾರ್ ಅವರು ಆಗಾಗ ಗಲಾಟೆ ಮಾಡುತ್ತಿದ್ದರು. ಅವಳಿಗಳಲ್ಲಿ ಒಂದು ಮಗು ಚೇತನ್‌ಗೆ ಮಾತನಾಡುವುದಕ್ಕೆ ಬರುತ್ತಿರಲಿಲ್ಲ, ಇದುವೇ ದಂಪತಿಯ ನಡುವಿನ ಕಾದಾಟಕ್ಕೆ ಕಾರಣವಾಗಿತ್ತು. ಮಾತಿನ ದೋಷದಿಂದ ಚೇತನ್ ಬಳಲುತ್ತಿದ್ದು, ಕುಟುಂಬದವರು ಆ ಮಗುವನ್ನು ಯಾವಾಗಲೂ ಸ್ಪೀಚ್ ಥೆರಪಿ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದರು. ಆದರೆ ಸಾಯಿಲಕ್ಷ್ಮಿ ಹಾಗೂ ಅನಿಲ್‌ಕುಮಾರ್ ಮಧ್ಯೆ ಮಗುವಿನ ಮಾತಿನ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.