ಬೆಳಗಾವಿ, ಮೇ 24: ಅವರು ಐದು ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. ಇದೇ ಕಾರಣಕ್ಕೆ ಗಂಡ ಬೇರೊಬ್ಬಳ ಜೊತೆಗೆ ಸಂಬಂಧ ಇಟ್ಟುಕೊಂಡು ಆಕೆಯನ್ನು ಗರ್ಭಿಣಿ ಮಾಡಿ ಮನೆಗೆ ಕರೆತಂದಿದ್ದಾನೆ. ಇದನ್ನ ಪ್ರಶ್ನಿಸಿದೆ ಕಂಡು ಕಾಣದಂತಿದ್ದ ಮೊದಲ ಪತ್ನಿ, ಬೈಕ್ ಅಪಘಾತದಲ್ಲಿ ಸತ್ತು ಹೋದಳು ಅಂತಾ ಅತ್ತೆ-ಮಾವ ಬಾಯಿ ಬಾಯಿ ಬಡೆದುಕೊಳ್ಳುತ್ತಾರೆ. ಆದರೆ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿದ ಪೊಲೀಸರು ಕಡೆಗೂ ಪ್ರಕರಣವನ್ನ ಭೇದಿಸಿ ಮೂರನ್ನು ಜೈಲಿಗಟ್ಟಿದ್ದಾರೆ.
ವಿಜಪುರ ಜಿಲ್ಲೆಯ ಚಡಚಣದ ನಿವಾಸಿ ರೇಣುಕಾ ಹೊನಕುಂಡೆ, ಬಿಎಚ್ಎಂಎಸ್ ಮುಗಿಸಿರುವ ಈಕೆ 2020ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲ್ಲಬಾದ್ ಗ್ರಾಮದ ಸಂತೋಷ್ ಹೊನಕುಂಡೆ ಎಂಬಾತ ಮೆಕ್ಯಾನಿಕಲ್ ಇಂಜಿನಿಯರ್ನನ್ನ ಮದುವೆಯಾಗಿದ್ದರು. ಆರಂಭದಲ್ಲಿ ಗಂಡ-ಹೆಂಡತಿ ಬಹಳ ಅನ್ಯೋನ್ಯವಾಗಿದ್ದು, ಹೀಗೆ ಮೂರು ವರ್ಷ ಬಹಳ ಚೆನ್ನಾಗಿ ಕಳೆಯುತ್ತಾರೆ.
ಮಗನೊಂದಿಗೆ ಕೈಜೋಡಿಸಿದ ತಂದೆ-ತಾಯಿ
ಇದಾದ ಬಳಿಕ ರೇಣುಕಾಗೆ ಮೂರ್ಛೆ ರೋಗ ಇರುವುದು ಗಂಡ ಸಂತೋಷ್ಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲದೆ ಆಕೆಗೆ ಮಕ್ಕಳು ಕೂಡ ಆಗುತ್ತಿಲ್ಲವೆನ್ನುವುದು ತಿಳಿದ ಸಂತೋಷ್, ತಾನೂ ದೂರದ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮಹಿಳೆ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾನೆ. ಇತ್ತ ರೇಣುಕಾಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಶುರು ಮಾಡುತ್ತಾನೆ. ಇದಕ್ಕೆ ಸಂತೋಷ್ ತಂದೆ-ತಾಯಿ ಕೂಡ ಸಾಥ್ ನೀಡುತ್ತಾರೆ.
ಕೆಲ ತಿಂಗಳ ಹಿಂದೆ ಅನೈತಿಕ ಸಂಬಂಧ ಇಟ್ಟುಕೊಂಡಾಕೆಯನ್ನ ಮದುವೆಯಾಗಿದ್ದೇನೆ ಅಂತಾ ಮನೆಗೂ ಈತ ಕರೆದುಕೊಂಡು ಬರುತ್ತಾನೆ. ಜೊತೆಗೆ ಆಕೆ ಗರ್ಭಿಣಿಯಾಗಿದ್ದಾಳೆ ಅನ್ನೋದನ್ನ ಕೂಡ ಹೇಳುತ್ತಾನೆ. ಇದರಿಂದ ಸಂತೋಷ್ ತಂದೆ-ತಾಯಿ ಖುಷಿ ಪಟ್ಟರೇ, ಇತ್ತ ರೇಣುಕಾ ಮಾತ್ರ ಸಾಕಷ್ಟು ನೊಂದುಕೊಳ್ಳುತ್ತಾಳೆ. ಎರಡನೇಯವಳು ಮನೆಗೆ ಬಂದ ಮೇಲೆ ರೇಣುಕಾಗೆ ಬಹಳಷ್ಟು ಕಿರುಕುಳ ನೀಡುತ್ತಾರೆ. ಹೇಗಾದರೂ ಮಾಡಿ ಆಕೆಯನ್ನ ಮನೆ ಬಿಟ್ಟು ಕಳುಹಿಸಬೇಕು ಅಂತಾ ಪ್ರಯತ್ನ ಮಾಡ್ತಾರೆ. ಆದರೆ ಎಲ್ಲವನ್ನು ಸಹಿಸಿಕೊಂಡು ರೇಣುಕಾ ಮನೆ ಬಿಟ್ಟು ಹೋಗಲ್ಲ ಅಂತಾ ಗೊತ್ತಾಗುತ್ತಿದ್ದಂತೆ ಕೊಲೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಾರೆ.
ಹೌದು.. ಯಾವಾಗ ರೇಣುಕಾ ಮನೆ ಬಿಟ್ಟು ಹೋಗ್ತಿಲ್ಲ ಅಂತಾ ಗೊತ್ತಾಗುತ್ತೆ ಆಗ ಸಂತೋಷ್ ಕೊಲೆಗೆ ಸ್ಕೇಚ್ ಹಾಕ್ತಾನೆ. ಅದರಂತೆ ಕೊಲೆಯನ್ನ ತಾನು ಮಾಡದೇ ತಂದೆ-ತಾಯಿ ಕಡೆಯಿಂದ ಮಾಡಿಸಿ ಬಚಾವ್ ಆಗೋ ಪ್ಲ್ಯಾನ್ ಮಾಡ್ತಾನೆ. ಅಪ್ಪ ಕಾಮಣ್ಣ, ತಾಯಿ ಜಯಶ್ರೀ ಅವರನ್ನು ಕೂಡಿಸಿಕೊಂಡು ಆಕೆ ಮನೆ ಬಿಟ್ಟು ಹೋಗ್ತಿಲ್ಲ ಈಗ ಎರಡನೇಯವಳು ಗರ್ಭಿಣಿ ಇದ್ದಾಳೆ. ಅವಳೇ ಮನೆ ಸೊಸೆಯಾಗಬೇಕು ಅಂತಾ ಹೇಳ್ತಾನೆ. ಇದನ್ನ ತಲೆಯಲ್ಲಿ ತೆಗೆದುಕೊಂಡ ಅಪ್ಪ-ಅಮ್ಮ ಮಗ ಹೇಳಿದಂತೆ ಮೊದಲ ಸೊಸೆಗೆ ಗತಿ ಕಾಣಿಸಲು ಮುಂದಾಗುತ್ತಾರೆ.
ಇಲ್ಲಿ ಮಗ ಹೇಳಿದಂತೆ ಅಪ್ಪ-ಅಮ್ಮ ಮೇ.17ರಂದು ಸೂಸೆ ಕೊಲೆಗೆ ಮುಂದಾಗುತ್ತಾರೆ. ಶನಿ ದೇವರಿಗೆ ಹೋಗಿ ಬರೋಣ ಬಾ ಅಂತಾ ಅತ್ತೆ ಜಯಶ್ರೀ ಸೊಸೆ ರೇಣುಕಾರನ್ನು ಕರೆದುಕೊಂಡು ಅಥಣಿ ತಾಲೂಕಿನ ಮದುಬಾವಿ ಗ್ರಾಮಕ್ಕೆ ಬರುತ್ತಾರೆ. ಅಂದು ಸಂಜೆವರೆಗೂ ಅಲ್ಲೇ ಇದ್ದ ಅತ್ತೆ, ಸೊಸೆ ಎಂಟು ಗಂಟೆ ಸುಮಾರಿಗೆ ತಮ್ಮೂರಿನಿಂದ ನಾಲ್ಕು ಕಿಮೀ ದೂರದಲ್ಲಿ ಹಾದು ಹೋಗುವ ಮುಖ್ಯ ರಸ್ತೆ ಬಳಿ ಬಂದು ಬಸ್ ಇಳಿಯುತ್ತಾರೆ. ಹೀಗೆ ಬಸ್ ಇಳಿದು ನಡೆದುಕೊಂಡು ಹೋಗುವುದು ಬೇಡ ಅಂದುಕೊಂಡು ಅತ್ತೆ ಜಯಶ್ರೀ ಆಕೆಯ ಗಂಡ ಕಾಮಣ್ಣನಿಗೆ ಕರೆ ಮಾಡಿ ಬೈಕ್ ತರುವಂತೆ ಹೇಳುತ್ತಾರೆ.
ಅಪಘಾತವೆಂದು ಬಿಂಬಿಸುವ ಕೆಲಸ
ಊರ ಕ್ರಾಸ್ಗೆ ಬೈಕ್ ಸಮೇತ ಬಂದ ಕಾಮಣ್ಣ ಹೆಂಡತಿಗೆ ಮಧ್ಯದಲ್ಲಿ ಸೊಸೆ ಹಿಂಬದಿ ಕೂಡಿಸಿಕೊಂಡು ಒಂದು ಕಿಮೀ ದೂರ ಒಳಗೆ ಬಂದಿದ್ದಾನೆ. ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ರೇಣುಕಾಳ ಕತ್ತು ಹಿಡಿದು ಆಕೆಯ ಕತ್ತಿಗೆ ಸೀರೆ ಸೆರಗಿನಿಂದ ಬಲವಾಗಿ ಅತ್ತೆ-ಮಾವ ಬಿಗಿದು ಉಸಿರುಗಟ್ಟಿಸಿ ಆಕೆಯನ್ನ ಕೊಂದು ಹಾಕಿದ್ದಾರೆ. ಇದಾದ ಬಳಿಕ ಇಬ್ಬರು ಸೇರಿಕೊಂಡು ಆಕೆಯ ಕುತ್ತಿಗೆಗೆ ಸೀರೆ ಕಟ್ಟಿ ಮತ್ತೊಂದು ಭಾಗವನ್ನ ಬೈಕ್ ಗೆ ಕಟ್ಟಿ ಆಕೆಯ ಶವವನ್ನ ಸುಮಾರು ನೂರು ಇನ್ನೂರು ಮೀಟರ್ ನಷ್ಟು ಬೈಕ್ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಇಲ್ಲಿ ಅಪಘಾತವಾಗಿ ಆಕೆ ಸತ್ತಳು ಅನ್ನೋದನ್ನ ಬಿಂಬಿಸುವ ಕೆಲಸ ಅತ್ತೆ-ಮಾವ ಮಾಡುತ್ತಾರೆ.
ಕೊಲೆ ಮಾಡಿದ ಬಳಿಕ ಮಗನಿಗೆ ಕರೆ ಮಾಡಿದ್ದ ಇಬ್ಬರು ಸೊಸೆ ಕಥೆಯನ್ನ ಮುಗಿಸಿದ್ದೇವೆ ಅಂತಾ ಹೇಳ್ತಾರೆ. ಬಳಿಕ ಆಕೆ ಬೈಕ್ ಮೇಲಿಂದ ಬಿದ್ದು ಸತ್ತಿದ್ದಾಳೆ ಎಂದು ಸ್ಥಳದಲ್ಲೇ ನಿಂತುಕೊಂಡು ಅಥಣಿ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿರುತ್ತಾರೆ. ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲಿ ಆಕೆ ಬೈಕ್ ಮೇಲಿಂದು ಬಿದ್ದು ಸತ್ತಿಲ್ಲ ಬದಲಿಗೆ ಉಸಿರು ಗಟ್ಟಿ ಸತ್ತಿರಬಹುದು ಎಂದು ಗೊತ್ತಾಗುತ್ತೆ.
ಇದರ ಆಧಾರದ ಮಾವ ಕಾಮಣ್ಣನನ್ನ ಎತ್ತಾಕ್ಕೊಂಡು ಬಂದು ತಮ್ಮದೇ ಭಾಷೆಯಲ್ಲಿ ವಿಚಾರಣೆ ಮಾಡುತ್ತಾರೆ. ಈ ವೇಳೆ ಮಾವ ತಾವೇ ಕೊಲೆ ಮಾಡಿದ್ದು ಆಕೆ ಬೈಕ್ ಮೇಲಿಂದ ಬಿದಿಲ್ಲವೆಂದು ಸತ್ಯ ಒಪ್ಪಿಕೊಳ್ಳುತ್ತಾರೆ. ಆತನೊಂದಿಗೆ ಕೈ ಜೋಡಿಸಿದ್ದ ಜಯಶ್ರೀಯನ್ನು ಕೂಡ ಪೊಲೀಸರು ಬಂಧಿಸುತ್ತಾರೆ. ಇತ್ತ ದೂರದಲ್ಲೇ ಕುಳಿತು ಪ್ಲ್ಯಾನ್ ಮಾಡಿ ಕೊಲೆ ಮಾಡಿಸಿದ್ದ ಗಂಡನನ್ನ ಕೂಡ ಕರೆತಂದು ಬಂದು ವಿಚಾರಣೆ ನಡೆಸಿ ಆತನನ್ನ ಕೂಡ ಜೈಲಿಗಟ್ಟಿದ್ದಾರೆ.
ಮೂವರು ಅರೆಸ್ಟ್
ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಅತ್ತೆ-ಮಾವ ಕೊಲೆಯಲ್ಲಿ ಭಾಗಿಯಾದರೆ, ಎರಡನೇಯವಳಿಗೆ ಜೀವನ ಕೊಡಬೇಕು ಅಂತಾ ಅಂದುಕೊಂಡ ಗಂಡ, ಹೆತ್ತ ತಂದೆ-ತಾಯಿ ಕಡೆಯಿಂದಲೇ ಕೊಲೆ ಮಾಡಿಸಿ ಆತ ಕೂಡ ಅಂದರ್ ಆಗಿದ್ದಾನೆ. ಪ್ರಕರಣದಲ್ಲಿ ಗಂಡ ಸಂತೋಷ್, ಮಾವ ಕಾಮಣ್ಣ, ಅತ್ತೆ ಜಯಶ್ರೀ ಮೂರು ಜನ ಅರೆಸ್ಟ್ ಆಗಿದ್ದು, ಮತ್ತೆ ಯಾರಾದ್ರೂ ಈ ಕೇಸ್ನಲ್ಲಿ ಭಾಗಿಯಾಗಿದ್ದಾರಾ ಅನ್ನೋದನ್ನ ಕೂಡ ಪೊಲೀಸರು ತನಿಖೆ ಮಾಡುತ್ತಿದ್ದಾರೆ.