ಸಾಹಿತ್ಯದ ಕೃಷಿಯ ಮೂಲಕ ಊರಿನ ಹೆಸರನ್ನು ಜಗದಗಲ ಪಸರಿಸಿದ ಕೀರ್ತಿ ಮುದ್ರಾಡಿಯವರದ್ದು – ಬಲ್ಲಾಡಿ ಚಂದ್ರಶೇಖರ್ ಭಟ್

0
7

ಹೆಬ್ರಿ :ಮುದ್ರಾಡಿಯಂತಹ ಚಿಕ್ಕ ಊರಿನ ಹೆಸರನ್ನು ನಾಡಿನ ಜಗದಗಲ ಪಸರಿಸಿದ ಹಿರಿಮೆ ಅಂಬಾತನಯ ಮುದ್ರಾಡಿಯವರದ್ದು. ನಿವೃತ್ತಿಯ ನಂತರವೂ ವೃತ್ತಿಯಲ್ಲಿ ತೊಡಗಿಕೊಂಡು ಅಪಾರ ಸಾಹಿತ್ಯ ಕೃಷಿಯಲ್ಲಿ ನಲಿದಾಡಿದ ಕಾಯಕ ಯೋಗಿಯವರು, ಸಾಹಿತ್ಯದ ಹತ್ತು- ಹಲವಾರು ಪ್ರಕಾರಗಳಲ್ಲಿ ಕೈಯಾಡಿಸಿ ಸೈ ಎನಿಸಿಕೊಂಡ ಧೀಮಂತರು. ಕಡಿಮೆ ಶಿಕ್ಷಣ ಪಡೆದಿದ್ದರೂ, ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಪಠ್ಯ ರಚಿಸಿದ ಸಾಧಕ ಅಂಬಾತನಯರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾಗಿ, ಸಾಹಿತ್ಯ ರಥದ ಚುಕ್ಕಾಣಿಯನ್ನು ಸರಿಯಾದ ದಿಶೆಯಲ್ಲಿ ಜಿಲ್ಲೆಯಾದ್ಯಂತ ವಿನೂತನ ಕಾರ್ಯಕ್ರಮಗಳ ಮೂಲಕ ಜನಮನಕ್ಕೆ ಕೊಂಡು ಹೋದವರು. ನಾಡಿನ ಹಲವಾರು ಖ್ಯಾತನಾಮ ಸಾಹಿತಿಗಳ ಬಳಗದಲ್ಲಿ ಗುರುತಿಸಿಕೊಂಡ ಅಂಬಾತನಯರು ಪಾರ್ತಿಸುಬ್ಬದಂತಹ ಶ್ರೇಷ್ಠ ಪುರಸ್ಕಾರಗಳನ್ನು ಪಡೆದ ಸಾಹಿತ್ಯ ಲೋಕದ ಮಾಣಿಕ್ಯ ಎಂದು ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ಹೇಳಿದರು, ಅವರು ಮುದ್ರಾಡಿಯ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಊರಿನ ಹಿರಿಯ ಸಾಹಿತಿ ಮತ್ತು ಶಾಲೆಯ ಟ್ರಸ್ಟ್ರಿಯೂ ಆಗಿದ್ದ ಅಂಬಾತನಯ ಮುದ್ರಾಡಿಯವರ ಮೂರನೇ ವರ್ಷದ ಸಂಸ್ಮರಣೆಯಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಶಿಕ್ಷಕ ಮಹೇಶ್ ನಾಯ್ಕ ಕೆ. ಮತ್ತು ವಿದ್ಯಾರ್ಥಿ ಪ್ರತೀಕ್ ಅಂಬಾತನಯರ ಬಗ್ಗೆ ವಿಚಾರ ಹಂಚಿಕೊಂಡರು.
ಕನ್ನಡ ಭಾಷಾ ಶಿಕ್ಷಕ ಪಿವಿ ಆನಂದ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶ್ಯಾಮಲಾ ವಂದಿಸಿದರು. ಶಿಕ್ಷಕರಾದ ರಘುಪತಿ ಹೆಬ್ಬಾರ್, ಚಂದ್ರಕಾಂತಿ ಹೆಗ್ಡೆ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಎಂ., ಶಾಲಾ ವಿದ್ಯಾರ್ಥಿ ನಾಯಕ ಕಾರ್ತಿಕ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here