ಮುಲ್ಕಿ : ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಸಪರಿವಾರ ಶ್ರೀ ಭಗವತಿ ಅಮ್ಮನವರಿಗೆ ಮಾರ್ಚ್ 4 ರಿಂದ 8 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ದಿವ್ಯಾಮೃತ ಭೋಜನ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾರ್ಚ್ 4ರಂದು ಬುಧವಾರ ವಿದ್ವಾನ್ ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯ್ಗೆ ಗುಡ್ಡೆ, ಮತ್ತು ಶ್ರೀಪತಿ ಭಟ್ ಹೊಯ್ಗೆ ಗುಡ್ಡೆ ಹಾಗೂ ವೇದಮೂರ್ತಿ ವೆಂಕಟೇಶ್ ತಂತ್ರಿ ಎಡಪದವು ರವರ ಮಾರ್ಗದರ್ಶನದಲ್ಲಿ ಬೆಳಿಗ್ಗೆ 8:30 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಬಳಿಕ ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ರವರು ಉಗ್ರಾಣ ಮುಹೂರ್ತ ನೆರವೇರಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಭವ್ಯ ಶೋಭಾ ಯಾತ್ರೆಯನ್ನು ಕ್ಷೇತ್ರದ ಯಾಜಿ ನಿರಂಜನ್ ಭಟ್ ಅವರು ವಿವಿಧ ಗಣ್ಯರೊಂದಿಗೆ ಉದ್ಘಾಟಿಸಲಿದ್ದಾರೆ ಎಂದರು.
ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು ಮಾ. 6ರಂದು ಬೆಳಿಗ್ಗೆ ಆಯತ ಕದಳಿ ಯಾಗ, ಸಂಜೆ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಮಾ. 8ರಂದು ಸಂಜೆ ಯುವ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ರವರ ಮುಂದಾಳತ್ವದಲ್ಲಿ ಕಡಲ ಮಾತೆಗೆ ಗಂಗಾರತಿ ,ಹಾಗೂ ಐದು ದಿನಗಳ ಕಾಲ ಧಾರ್ಮಿಕ ಸಭಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯಲಿದೆ.
ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ವಿವಿಧ ಕಾಮಗಾರಿಗಳು ನಡೆದಿದ್ದು ದೇವಸ್ಥಾನದ ಸುತ್ತಲೂ ಸುಮಾರು 50 ಲಕ್ಷ ವೆಚ್ಚದಲ್ಲಿ ಇಂಟರ್ಲಾಕ್ ಅಳವಡಿಕೆ, ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ 20 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಶಾಸಕ ಉಮಾನಾಥ ಕೋಟ್ಯಾನ್ ಅನುದಾನದಲ್ಲಿ ಹಳೆಯಂಗಡಿಯಿಂದ ಸಸಿಹಿತ್ಲು ವರೆಗೆ ಸುಮಾರು 10 ಲಕ್ಷ ವೆಚ್ಚದ ಡಾಮರೀಕರಣ, ಹಳೆಯಂಗಡಿ ಗ್ರಾಮ ಪಂಚಾಯತ್ ವತಿಯಿಂದ 4 ಲಕ್ಷ ಬೆಚ್ಚದಲ್ಲಿ ದೇವಸ್ಥಾನದ ಮುಂಭಾಗದ ಚರಂಡಿ ದುರಸ್ತಿ ಹಾಗೂ 1.5 ಲಕ್ಷ ವೆಚ್ಚದಲ್ಲಿ ಹೈ ಮಾಸ್ಟ್ ಬೀದಿ ದೀಪಗಳ ಅಳವಡಿಕೆ, ದಾನಿಗಳ ನೆರವಿನಿಂದ ಸುಮಾರು 75 ಲಕ್ಷ ವೆಚ್ಚದಲ್ಲಿ ದೇವಳದ ಎರಡು ಪ್ರಧಾನ ಗೋಪುರಗಳ ನವೀಕರಣ, ಮತ್ತಿತರ ಅಭಿವೃದ್ಧಿ ಕಾರ್ಯಗಳು ಸುಮಾರು 5 ಕೋಟಿ ವೆಚ್ಚದಲ್ಲಿ ನಡೆದಿದೆ ಎಂದರು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ಸುಮಾರು 22 ಸಮಿತಿಯವರು ಆಹೋರಾತ್ರಿ ದುಡಿಯುತ್ತಿದ್ದು, ದೇವಸ್ಥಾನಕ್ಕೆ ಸುಮಾರು 2 ಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು ಭಕ್ತಾದಿಗಳಿಗೆ ತೊಂದರೆಯಾಗದಂತೆ 10 ಎಕರೆ ವಿಸ್ತೀರ್ಣದ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಬ್ರಹ್ಮಕಲಶೋತ್ಸವದ ದಿನಗಳಲ್ಲಿ ನಿರಂತರ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಕ್ಷೇತ್ರದಲ್ಲಿ ಎ. 10ರಂದು ನಡಾವಳಿ ಉತ್ಸವ, ಎ.11ರಿಂದ 16ರವರೆಗೆ ಭರಣಿ ಮಹೋತ್ಸವ, ಎ.19 ರಂದು ಓಂ ನಮೋ ಭಗವತೇ ವಾಸುದೇವಾಯ ದ್ವಾದಕ್ಷರೀ ಮಾತ್ರೋಚಾರ ನಡೆಯಲಿದೆ,ಮುಂದಿನ ದಿನಗಳಲ್ಲಿ ನೂತನ ಅನ್ನಛತ್ರ ಹಾಗೂ ಪ್ರವಾಸಿ ಮಂದಿರ ನಿರ್ಮಾಣದ ಯೋಜನೆ ಇದೆ ಎಂದರು. ಅವರು ಮಾತನಾಡಿ ಪ್ಲಾಸ್ಟಿಕ್ ಮುಕ್ತ ಬ್ರಹ್ಮಕಲಶೋತ್ಸವಕ್ಕೆ ಆದ್ಯತೆ, ಅವಶ್ಯಕತೆ ಇರುವವರಿಗೆ ದೇವರ ದರ್ಶನಕ್ಕೆ ವಿದ್ಯುತ್ ಚಾಲಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಾಮನ್ ಇಡ್ಯಾ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕರಾದ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಲ್ಚಡ, ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ ಕರಿತೋಟ, ಕೋಶಾಧಿಕಾರಿ ಸುರೇಶ್ ಬಂಗೇರ, ಮಾತೃ ಮಂಡಳಿ ಅಧ್ಯಕ್ಷೆ ಕಸ್ತೂರಿ ಪಂಜ, ಸಮಿತಿಯ ಉಪಾಧ್ಯಕ್ಷ ಉದಯ ಸುವರ್ಣ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಉಪಾಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಸ್ವಾಗತಿಸಿ ನಿರೂಪಿಸಿದರು.

