ಮುಲ್ಕಿ: ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕ- ಡಾ. ವಾಸುದೇವ ಬೆಳ್ಳೆ

0
14

ಮುಲ್ಕಿ: ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2025-26 ನೇ ಸಾಲಿನ, ನಾಲ್ಕನೇ ಆವೃತ್ತಿಯ, ” *ಉಡಾನ್ ” – ಅಂತರ್ಕಾಲೇಜು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ ಮಾತನಾಡಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ, ಕೌಶಲ್ಯ ವೃದ್ಧಿಗೆ ಪೂರಕವಾಗಿದೆ. ಕಾರ್ಯಕ್ರಮದ ಉದ್ದೇಶ, “ಗಗನದಲ್ಲಿ ಎತ್ತರಕ್ಕೆ ಹಾರು” ಎನ್ನುವ ಆಶಯ ಉತ್ತಮವಾಗಿದ್ದು, ವಿದ್ಯಾರ್ಥಿಗಳ ಮುಂದಿರುವ ಅನಂತ ಸಾಧ್ಯತೆಗಳನ್ನು ಸಂಕೇತಿಸುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ರೇಖಾ ಶೆಟ್ಟಿ, ಲಯನ್ಸ್ ಕ್ಲಬ್ ಬಪ್ಪನಾಡು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಅಧ್ಯಕ್ಷ ಅನಿಲ್ ಕುಮಾರ್ ಮತ್ತು ರೋಟರಿ ಕಿನ್ನಿಗೋಳಿ ಸಂಸ್ಥೆಯ ಅಧ್ಯಕ್ಷ ಸಾಯಿನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ್ ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ ಕುಳಾಯಿ ಎಂ.ಡಿ.ಎಸ್ ಪದವಿ ಪೂರ್ವ ಕಾಲೇಜು, ಸಮಗ್ರ ಪ್ರಶಸ್ತಿ ಪಡೆಯಿತು.

ಒಟ್ಟು ಎಂಟು ಪದವಿ ಪೂರ್ವ ಕಾಲೇಜುಗಳ ಸುಮಾರು 220 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಅನೇಕ ಸ್ಪರ್ಧೆಗಳಾದ ರಸ ಪ್ರಶ್ನೆ, ಮೆಹಂದಿ, ಫೇಸ್ ಪೇಂಟಿಂಗ್, ಕೊಲಾಜ್ ಮೇಕಿಂಗ್, ಸಮೂಹ ಗಾನ, ಮೊಬೈಲ್ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ, ಬ್ರಾಂಡ್ ರಂಗೋಲಿ, ವಾಲಿ ಬಾಲ್ ಹಾಗೂ ಥ್ರೋ ಬಾಲ್ ಪಂದ್ಯಗಳಲ್ಲಿ ಭಾಗವಹಿಸಿದ್ದವು. ಕಿನ್ನಿಗೋಳಿ ಇನ್ನರ್ ವೀಲ್ ರೋಟರಿ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಸಂಸ್ಥೆಗಳು ಬಹುಮಾನಗಳನ್ನು ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here