ಮುಲ್ಕಿ: ನಗರದ ಕಾರ್ನಾಡ್ ನಿಂದ ಕಾರ್ನಾಡ್ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 66 ರನ್ನು ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ
ಸಾವಿರಾರು ವಾಹನಗಳು ಓಡಾಡುತ್ತಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಗೆ ಗತಿ ಗೋತ್ರ ಇಲ್ಲದಂತಾಗಿದ್ದು ಪ್ರತಿ ಮಳೆಗಾಲದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಹೊಂಡಮಯವಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಈ ರಸ್ತೆಯ ಹರಿಹರ ಕ್ಷೇತ್ರದ ಎದುರು ಭಾಗದಿಂದ ಧರ್ಮಸ್ಥಾನದ ದ್ವಾರದವರೆಗೆ ಕಳೆದ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಉಂಟಾಗಿ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಳೆದ ಮಳೆಗಾಲದಲ್ಲಿ ಕೂಡ ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಬಳಿಕ ಕಳಪೆ ತೇಪೆ ಕಾಮಗಾರಿ ನಡೆಸಲಾಗಿತ್ತು. ತೇಪೆ ಕಾಮಗಾರಿ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟವಾಗಿ , ಸ್ಥಳೀಯ ನಗರ ಪಂಚಾಯತ್ ಸದಸ್ಯ ಹರ್ಷರಾಜ ಶೆಟ್ಟಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ತೇಪೆ ಕಾಮಗಾರಿ ಮೊದಲ ಮಳೆಗೆ ಕೊಚ್ಚಿ ಹೋಗಿದ್ದು ರಸ್ತೆ ಹೊಂಡಮಯವಾಗಿ ಪರಿಣಮಿಸಿದೆ
ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಮಾಧ್ಯಮದ ಜೊತೆ ಮಾತನಾಡಿ, ದಿನವೊಂದಕ್ಕೆ ಸಾವಿರಾರು ವಾಹನಗಳು ಓಡಾಡುವ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಗೆ ಕಾರ್ಯಕಲ್ಪ ನೀಡಲು ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ರಸ್ತೆ ಅವ್ಯವಸ್ಥೆಗಳ ಆಗರವಾಗಿದ್ದು, ಕೂಡಲೇ ಕಾಂಕ್ರಿಟೀಕರಣದ ಮೂಲಕ ರಸ್ತೆ ಪೂರ್ಣ ಪ್ರಮಾಣದ ದುರಸ್ತಿಗೆ ಇಲಾಖೆ ಮುಂದಾಗಬೇಕು ಇಲ್ಲದಿದ್ದರೆ ಲೋಕೋಪಯೋಗಿ ಇಲಾಖೆಯ ಕಚೇರಿಯ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ

