ಮುಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅಪಾರ ಕೃಷಿ ಹಾನಿ ಸಂಭವಿಸಿದೆ.
ತಾಲೂಕಿನ ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಕಿಲ್ಪಾಡಿ ಕುಮಾರ ಮಂಗಲ ದೇವಸ್ಥಾನದ ರಸ್ತೆ ಜಲಾವೃತವಾಗಿದೆ. ಈ ಭಾಗದಲ್ಲಿ ಕೆಲವು ಕುಟುಂಬಗಳಿದ್ದು ಪ್ರತೀ ಮಳೆಗಾಲದಲ್ಲಿ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಸ್ಥಳೀಯರಾದ ಚಂದ್ರಶೇಖರ ಮಯ್ಯ ಮಾತನಾಡಿ, ದೇವಸ್ಥಾನದ ಬದಿಯಲ್ಲಿ ಹರಿಯುತ್ತಿರುವ ತೋಡಿನ ಹೂಳೆತ್ತದೆ ಕೃತಕ ನೆರೆ ಉಂಟಾಗಿ ಅಪಾರ ಕೃಷಿ ನಾಶವಾಗಿದ್ದು ಅಪಾಯದ ಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಶಾಸಕರಿಗೆ, ತಾಲೂಕು ಆಡಳಿತಕ್ಕೆ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಪ್ರತಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಿ ಈ ಭಾಗದ ಜನ ಹೈರಾಣಾಗಿ ಹೋಗಿದ್ದಾರೆ. ದೇವಸ್ಥಾನಕ್ಕೆ ಬರುವ ರಸ್ತೆಯು ಮಳೆಗಾಲದಲ್ಲಿ ಮುಳುಗುತ್ತಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಆಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಇದರಿಂದಾಗಿ ಗ್ರಾಮದ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಪಂಚಾಯತ್ ಸದಸ್ಯ ಗೋಪಿನಾಥ ಪಡಂಗ ಮಾತನಾಡಿ, ಈ ಭಾಗದಲ್ಲಿ ಹರಿಯುತ್ತಿರುವ ತೋಡಿನ ಹೂಳೆತ್ತಲು ಜಲಾನಯನ ಇಲಾಖೆ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.