ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಸೀನಪ್ಪಯ್ಯ ಕೋಡಿ (ಎಸ್. ಕೋಡಿ) ಬಳಿ ಟಿಪ್ಪರ್ ಅದರ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.
ಉಡುಪಿ ಜಿಲ್ಲೆಯ ಕಾಪು ಕಡೆಯಿಂದ ನಿಡ್ಡೋಡಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಎಸ್. ಕೋಡಿ ಬಳಿ ವಾಹನವೊಂದನ್ನು ಓವರ್ ಟೆಕ್ ಮಾಡುವ ರಭಸದಲ್ಲಿ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ರಸ್ತೆ ಬದಿ ಮಣ್ಣಿನ ರಸ್ತೆಯಲ್ಲಿ ಚಲಿಸಿದೆ.
ಈ ಸಂದರ್ಭ ಹೆದ್ದಾರಿ ರಸ್ತೆ ಬದಿ ಕುಡಿಯುವ ನೀರಿನ ಪೈಪ್ ಅಳವಡಿಸಿದ ಅವೈಜ್ಞಾನಿಕ ಕಾಮಗಾರಿಯಿಂದ ಟಿಪ್ಪರ್ ವಾಹನ ಜೇಡಿ ಮಣ್ಣಿನಲ್ಲಿ ಜಾರಿ ಸೀದಾ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ
ಅಪಘಾತದ ರಭಸಕ್ಕೆ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಜೇಡಿ ಮಣ್ಣಿನಲ್ಲಿ ಟಿಪ್ಪರ್ ನ ಚಕ್ರ
ಹೂತು ಹೋಗಿದೆ.ಟಿಪ್ಪರ್ ನಲ್ಲಿ ಚಾಲಕ ಸಹಿತ ಮೂವರು ಪ್ರಯಾಣಿಕರಿದ್ದು ಪವಾಡ ಸದೃಶ ಪಾರಾಗಿದ್ದಾರೆ
ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು ಅಪಘಾತಕ್ಕೀಡಾದ ಟಿಪ್ಪರ್ ಹಾಗೂ ವಿದ್ಯುತ್ ಕಂಬವನ್ನು ಕ್ರೇನ್ ಮೂಲಕ ತೆರವುಗೊಳಿಸಲಾಗಿದೆ.
ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆದಿದ್ದು ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ