ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಪುರಸಭೆಯ ಮಾಸಿಕ ಸಭೆ ಅಕ್ಟೋಬರ್ 15ರಂದು ಕಚೇರಿಯ ಸಭಾಂಗಣದಲ್ಲಿ ಶ್ರೀಮತಿ ಜಯಶ್ರೀ ಕೇಶವ್ ಅಧ್ಯಕ್ಷತೆಯಲ್ಲಿ ಹಾಗೂ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ವಾತಿ ಪ್ರಭು, ಮುಖ್ಯಾಧಿಕಾರಿ ಇಂದು ಅವರ ಸಮಕ್ಷಮ ನಡೆಯಿತು. ಜನಪ್ರತಿನಿಧಿ ಕೊರಗಪ್ಪ ಅವರು ಕಳೆದ ನಾಲ್ಕು ಮೀಟಿಂಗ್ಗಳಿಂದ ಬೊಬ್ಬೆ ಹೊಡೆದು ವಿವಿಧ ವಿಷಯಗಳ ಬಗ್ಗೆ ನಿರ್ಣಯವನ್ನು ಮಾಡಿಸಿದರೂ ಕೂಡ, ದಾಖಲೀಕರಣ ಏಕೆ ಮಾಡಿಲ್ಲ ಎಂದು ನೇರವಾಗಿ ಪ್ರಶ್ನಿಸಿದರು. ಉದಾಹರಣೆಗೆ ಪೈಪ್ಲೈನ್ ಕಾಮಗಾರಿಯನ್ನು ಮುಂದುವರಿಸುವ ಬಗ್ಗೆ ಎಲ್ಲ ಸದಸ್ಯರಿಂದ ತಡೆ ಇದ್ದರೂ ಕೂಡ ಸದಸ್ಯರ ಗಮನಕ್ಕೆ ತರದೆ ಕಾಮಗಾರಿಯನ್ನು ಮುಂದುವರಿಸಲಾಗಿದೆ. ಶಾಸಕರೊಂದಿಗಿನ ಸಭೆಯಲ್ಲಿ ಪೈಪ್ಲೈನ್ ಹಾಗೂ ರಸ್ತೆ ಕಾಮಗಾರಿಗಳನ್ನು ಪಿಡಬ್ಲ್ಯೂಡಿ, ಜಲ ಮಂಡಳಿ ಇಲಾಖೆಯವರು ಮಾಡುತ್ತಾರೆಂದು ತಿಳಿಸಿದರೂ, ಕೂಡ ಆ ಬಗ್ಗೆ ಯಾವುದೇ ಕ್ರಮ ಜರುಗಿಲ್ಲ.

ಈ ವಿಚಾರಗಳಿಗೆ ಪೂರಕವಾಗಿ ಮಾತನಾಡಿದ ಸುರೇಶ್ ಕೋಟ್ಯಾನ್ ಅವರು ಕಳೆದ ಐದು ವರ್ಷಗಳಿಂದ ಹಲವಾರು ವಿಷಯಗಳ ಬಗ್ಗೆ ನಾವು ಸಭೆಯ ಗಮನಕ್ಕೆ ತಂದರೂ ಕೂಡ ಅಂತಹ ಎಲ್ಲ ಕಾಮಗಾರಿಗಳು ಜಾರಿಗೆ ಬರದೆ ಕೇವಲ ನಿರ್ಣಯಗಳಾಗಿ ಉಳಿದುಕೊಂಡಿವೆ ಎಂದು ಅಧ್ಯಕ್ಷರು, ಉಪಾಧ್ಯಕ್ಷರುಗಳ ಗಮನ ಸೆಳೆದರು. ಶಾಸಕರೇ ಹೇಳಿದರೂ ಕೂಡ ಕಾಮಗಾರಿಯನ್ನು ಮಾಡದೇ ಇರುವ ಬಗ್ಗೆ ಯಾರು ಹೊಣೆ?, ಜೀವ ಹಾನಿಯಾದರೆ ಯಾರು ತಲೆ ಕೊಡುತ್ತಾರೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಅಧಿಕಾರಿಗಳ ಕಡೆಯಿಂದ ಉತ್ತರವಿಲ್ಲ.
ಕಾಮಗಾರಿಗಳ ಸರ್ವೆ ಮಾಡುವವರು ಒಬ್ಬರು ಅವರಲ್ಲಿ ಪ್ರಶ್ನೆ ಮಾಡಿದರೆ ಕಾಮಗಾರಿ ಮಾಡುವವರು ನಾವಲ್ಲ ಎಂದು ಉತ್ತರ. ಸಂಬಂಧಪಟ್ಟ ಇಲಾಖೆಯವರನ್ನು ಕೇಳಿದರೆ ನಮಗೆ ಸಂಬಂಧ ಇಲ್ಲ ಎನ್ನುವ ಉತ್ತರ ಹೀಗೆ ಪಿಡಬ್ಲ್ಯೂಡಿ, ಲೋಕೋಪಯೋಗಿ, ರಾಜ್ಯ ರಸ್ತೆ ಸಾರಿಗೆ, ಪುರಸಭಾ ಅಧಿಕಾರಿಗಳ ನಡುವೆ ಎಲ್ಲವೂ ಗೊಂದಲಮಯ, ಗೋಜಲು ಮಯ.
ವಿದ್ಯಾ ಗಿರಿ ಪ್ರದೇಶದಲ್ಲಿ ಕಾಮಗಾರಿ ಪೂರ್ಣವಾಗದೇ ಇದ್ದರೂ ಕೂಡ ಡೋರ್ ನಂಬರ್ ಕೊಟ್ಟ ಬಗ್ಗೆ ಪುರಸಭಾ ಇಂಜಿನಿಯರ್ ನಳಿನ್ ಅವರನ್ನು ಉಪಾಧ್ಯಕ್ಷ ನಾಗರಾಜ ಪೂಜಾರಿ, ಆದಿಯಾಗಿ ಪ್ರತಿಯೊಬ್ಬರು ತರಾಟೆಗೆ ತೆಗೆದುಕೊಂಡರು. ಕಾಮಗಾರಿಯನ್ನು ಪರಿಶೀಲಿಸದೆ ಹಲವಾರು ಕಡೆಗಳಲ್ಲಿ, ಡೋರ್ ನಂಬರ್ ನೀಡಿ, ಮಳೆ ನೀರು, ಚರಂಡಿ ನೀರು ಇತ್ಯಾದಿಗಳಿಗೆ ತಡೆಯಾಗಿ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ಎಲ್ಲ ಸದಸ್ಯರು ದೂರಿಕೊಂಡರು.
1976 ರಲ್ಲಿ ಪುರಸಭೆ ರಚನೆಗೊಂಡರು ಕೂಡ ಈತನಕ ವಾರ್ಡ್ ಒಂದು ಎರಡು ಮೂರು ನಾಲ್ಕಕ್ಕೆ ನೀರಿನ ಟ್ಯಾಂಕಿಯೇ ಇಲ್ಲ ಎಂದು ಪಿಕೆ ಥಾಮಸ್ ನೇರ ಆಪಾದನೆ ಗೈದರು. ನಮ್ಮ ಮೂಡುಬಿದಿರೆಯನ್ನು ಹಾಳುಮಾಡಬೇಡಿ ಎಂದು ಅಧಿಕಾರಿಗಳಿಗೆ ರಾಜೇಶ್ ನಾಯಕ್ ನೇರ ನಿರ್ದೇಶನವನ್ನು ನೀಡಿದರು. ಹೋಟೆಲ್ ಮಚಲಿಯವರಿಂದಾಗಿ ಹತ್ತಿರದ ಎಂಟು ಮನೆಗಳಿಗೆ ಬಾವಿಯ ನೀರನ್ನು ಕುಡಿಯಲಾಗುತ್ತಿಲ್ಲ. ಅದನ್ನು ತಕ್ಷಣ ಸರಿಪಡಿಸಿ ಎಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಸುರೇಶ್ ಕೋಟ್ಯಾನ್ ಅವರು ಇಂಜಿನಿಯರ್ ದಯಾನಂದ್ ಸಭೆಗೆ ಸುಳ್ಳು ಮಾಹಿತಿಯನ್ನು ನೀಡಿ ಕೆ ತ್ರಿ ತರಬೇತಿಗಾಗಿ ತೆರಳಿರುತ್ತಾರೆ ಎಂದು ಆಪಾದಿಸಿದರು. ಲೇಬರ್ ಶಾಲೆಯ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುರಸಭಾ ವಾಣಿಜ್ಯ ಕಟ್ಟಡಕ್ಕೆ ನೇರ ಪ್ರವೇಶದ ಅವಕಾಶವನ್ನು ನೀಡದೇ ಇರುವುದರಿಂದಾಗಿ ಅದು ಉಪಯೋಗಕ್ಕೆ ಬರದೆ ಹೋಗುವ ಸಂಭವನೀಯತೆಯನ್ನು ಕೂಡ ಸುರೇಶ್ ಕೋಟ್ಯಾನ್ ಅವರು ಪುರಸಭೆಯ ಗಮನಕ್ಕೆ ತಂದರು.
ಬೋರ್ ವೆಲ್ ಗಳ ಅರೆಬರೆ ಕಾಮಗಾರಿಯನ್ನು ಮಾಡಿ ಸಂಪರ್ಕವನ್ನು ನೀಡದೆ ನೀರು ಸಪ್ಲೈ ಆಗದೆ ಇರುವ ಬಗ್ಗೆ ಸದಸ್ಯರುಗಳು ಅಧಿಕಾರಿಗಳ ಗಮನ ಸೆಳೆದರು. ಟೆಂಡರ್ ನಲ್ಲಿ ಕೆಲಸವನ್ನು ಮಾತ್ರ ಮಾಡಿಸಿ ಪುರಸಭೆಯಿಂದಲೇ ವಿದ್ಯುತ್ ಬಲ್ಬುಗಳನ್ನು ಅಳವಡಿಸುವ ಕೆಲಸ ಮಾಡಬೇಕೆಂದು ಪ್ರಸಾದ್ ಕುಮಾರ್ ಆಗ್ರಹಿಸಿದರು.
.