ಮಂಗಳೂರು: ಮಂಗಳೂರು ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳು ನಿಗೂಢವಾಗಿ ಮೃತಪಟ್ಟಿವೆ. ಕೇವಲ ಒಂದು ವಾರದಲ್ಲೇ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಒಂಬತ್ತು ಪ್ರಾಣಿಗಳು ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ. 2 ಕೃಷ್ಣಮೃಗ, 5 ಪುನುಗು ಬೆಕ್ಕು, 1 ಬಿಳಿ ಗೂಬೆ ಹಾಗೂ 1 ಬರಿಂಕ ಸೇರಿದಂತೆ ಒಟ್ಟು 9 ಪ್ರಾಣಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಪಿಲಿಕುಳ ಜೈವಿಕ ಉದ್ಯಾನವನದೊಳಗೆ ನೀರು ನುಗ್ಗಿ, ಕಂಪೌಂಡ್ ಕುಸಿದು ಪ್ರಾಣಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ವನ್ಯಜೀವಿ ಸಂರಕ್ಷಕ ಭುವನ್ ದೇವಾಡಿಗ ಅವರು ಸೆಂಟ್ರಲ್ ಝೂ ಅಥಾರಿಟಿಗೆ ದೂರು ನೀಡಿದ್ದರು. ಈ ದೂರಿನನ್ವಯ ಮುಖ್ಯ ವನ್ಯಜೀವಿ ವಾರ್ಡನ್‌ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಇದಾಗಿ ವಾರದೊಳಗೆ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಒಂಬತ್ತು ಪ್ರಾಣಿಗಳು ಮೃತಪಟ್ಟ ಬಗ್ಗೆ ಮಾಹಿತಿ ದೊರೆತಿದೆ.
ಪಿಲಿಕುಳದಲ್ಲಿ 5 ಪುನುಗು ಬೆಕ್ಕುಗಳು, 2 ಕೃಷ್ಣಮೃಗ ಮತ್ತು ಒಂದು ಬರಿಂಕ ಮಾತ್ರ ಮೃತಪಟ್ಟಿದ್ದು, ಮಳೆಯ ಹಿನ್ನೆಲೆಯಲ್ಲಿ ಶೀತ ವಾತಾವರಣ ಹೆಚ್ಚಾದ ಪರಿಣಾಮ ಈ ಪ್ರಾಣಿಗಳು ಮೃತಪಟ್ಟಿವೆ ಎಂದು ಜೈವಿಕ ಉದ್ಯಾನವನದ ಪ್ರಭಾರ ನಿರ್ದೇಶಕರು ತಿಳಿಸಿದ್ದಾರೆ.
ಡಾ. ಅರುಣ್ ಕುಮಾರ್ ಶೆಟ್ಟಿ ಹೇಳಿದ್ದಿಷ್ಟು
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ಇತ್ತೀಚೆಗೆ ಉದ್ಯಾನವನದಲ್ಲಿ ವಿವಿಧ ಕಾರಣಗಳಿಂದ ಪ್ರಾಣಿಗಳು ಸಾವನ್ನಪ್ಪಿವೆ. ಆರು ಬೆಕ್ಕುಗಳಲ್ಲಿ, ಐದು ಬೆಕ್ಕುಗಳು ಕಳೆದ ನಾಲ್ಕು ದಿನಗಳಲ್ಲಿ ಸಾವನ್ನಪ್ಪಿವೆ.ಇನ್ನು ಕಳೆದ ಶುಕ್ರವಾರ ಅಷ್ಟೇ ದೊಡ್ಡ ಅಳಿಲು ಸಾವನ್ನಪ್ಪಿದ್ದರೆ, ಕಳೆದ ಮೂರು ದಿನಗಳಲ್ಲಿ ನಾಲ್ಕು ಹೆಣ್ಣು ಬೆಕ್ಕುಗಳು ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.
ನಾನು ವೈದ್ಯರ ಜೊತೆ ಉದ್ಯಾನವನಕ್ಕೆ ಭೇಟಿ ನೀಡಿದ್ದು, ಮಲಬಾರ್ ದೈತ್ಯ ಅಳಿಲಿನ ಮರಣೋತ್ತರ ಪರೀಕ್ಷೆಯನ್ನು ನನ್ನ ಸಮ್ಮುಖದಲ್ಲಿ ನಡೆಸಲಾಯಿತು. ಆ ಅಳಿಲಿಗೆ 16 ವರ್ಷ ವಯಸ್ಸಾಗಿದ್ದು, ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಸಾವನ್ನಪ್ಪಿರಬಹುದು. ಇನ್ನು ಹೆಣ್ಣು ಬೆಕ್ಕುಗಳ ಮಾದರಿಗಳನ್ನು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್ ಮತ್ತು ಬನ್ನೇರುಘಟ್ಟದಲ್ಲಿರುವ ವನ್ಯಜೀವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಜಿಂಕೆ ಅಂತರ್-ಸಂತಾನೋತ್ಪತ್ತಿ ಸಂಬಂಧಿತ ಕಾರಣಗಳಿಂದ ಸಾವನ್ನಪ್ಪಿರಬಹುದು. ಪರೀಕ್ಷಾ ವರದಿ ನಮಗೆ ತಲುಪಿದ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ . ಸದ್ಯ ಜೈವಿಕ ಉದ್ಯಾನವನದಲ್ಲಿ ಸುಮಾರು 1,250 ಪ್ರಾಣಿಗಳು, ಪಕ್ಷಿಗಳು ಮತ್ತು ಸರಿಸೃಪಗಳು ಇವೆ ಎಂದು ಮಾಹಿತಿ ನೀಡಿದರು.