ಸ್ವಿಮ್ಮಿಂಗ್ ಪೂಲ್‌ನಲ್ಲಿ ತಾಯಿ-ಮಕ್ಕಳ ನಿಗೂಢ ಸಾವು : ಕೊಲೆ ಶಂಕೆ ಗಟ್ಟಿಮಾಡಿದ ಪ್ರಕರಣ

0
22

ತೆಲಂಗಾಣ : ತೆಲಂಗಾಣದ ಹನುಮಕೊಂಡ ಜಿಲ್ಲೆಯ ಐನವೋಲು ಮಂಡಲದ ಪುನ್ನೇಲ್ ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ನಡೆದ ಈ ದುರ್ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದು ವ್ಯವಸ್ಥಿತ ಕೊಲೆಯೋ ಅಥವಾ ಆಕಸ್ಮಿಕ ಅಪಘಾತವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತರನ್ನು ಫರ್ಹಾತ್ (26) ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಉಮೇರಾ (8) ಹಾಗೂ ಆಯೇಷಾ (6). ಮೃತ ಫರ್ಹಾತ್ ಮೂರು ತಿಂಗಳ ಗರ್ಭಿಣಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮೊಹಮ್ಮದ್ ಚಾಂದ್ ಪಾಷಾ ಎಂಬುವವರು ನಡೆಸುತ್ತಿರುವ ‘ಧರಣಿ ವೆಂಚರ್’ ಸ್ವಿಮ್ಮಿಂಗ್ ಪೂಲ್ನಲ್ಲಿ ಈ ಘಟನೆ ನಡೆದಿದೆ.

ಚಾಂದ್ ಪಾಷಾ ಅವರ ಮಗ ಹಜಾರುದ್ದೀನ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್ಗೆ ಬಂದಿದ್ದರು. ಬುಧವಾರ ರಾತ್ರಿ ಇವರು ಪೂಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಇದು ಆಕಸ್ಮಿಕವಾಗಿ ನಡೆದ ಸಾವು ಎಂದು ಪತಿ ಹಜಾರುದ್ದೀನ್ ಹೇಳುತ್ತಿದ್ದಾರೆ.ಆದರೆ ಮೃತ ಫರ್ಹಾತ್ ತಂದೆ ಎಸ್ಕೆ ಅಲಿ ಮತ್ತು ಕುಟುಂಬಸ್ಥರು ಇದನ್ನು ಕೊಲೆ ಎಂದು ಆರೋಪಿಸಿದ್ದಾರೆ. “ಗರ್ಭಾವಸ್ಥೆಯ ವಿಚಾರವಾಗಿ ಇತ್ತೀಚೆಗೆ ಪತಿ-ಪತ್ನಿಯ ನಡುವೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಹಜಾರುದ್ದೀನ್ ಪತ್ನಿ ಮತ್ತು ಮಕ್ಕಳನ್ನು ಕೊಂದು, ಈಗ ಅದನ್ನು ಅಪಘಾತ ಎಂದು ಬಿಂಬಿಸುತ್ತಿದ್ದಾನೆ” ಎಂದು ಅವರು ದೂರಿದ್ದಾರೆ.

ಪೊಲೀಸರು ಸ್ವಿಮ್ಮಿಂಗ್ ಪೂಲ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮತ್ತು ಕುಟುಂಬಸ್ಥರ ವಿಚಾರಣೆಯ ನಂತರ ನಿಖರ ಕಾರಣ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here