ಬಂಟ್ವಾಳ:ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಗಳಿಸುವುದರ ಜೊತೆಗೆ ‘ಪ್ರಜಾವಾಣಿ’ ದಿನಪತ್ರಿಕೆ ಸಹಿತ ವಿವಿಧ ಮಾಧ್ಯಮಗಳ ಮೂಲಕ ಹೆಚ್ಚುವರಿ ಜ್ಞಾನ ಪಡೆದು ಸ್ವಾಭಿಮಾನ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದು ಲೊರೆಟ್ಟೋಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಹೇಳಿದ್ದಾರೆ.
ಇಲ್ಲಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ಸಂಜೆ ಏರ್ಪಡಿಸಿದ್ದ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜಯಶೀಲ ಚಂದ್ರಶೇಖರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕ್ಲಬ್ಬಿನ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ನಿಕಟಪೂರ್ವ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರವಿ ಕೆ. ಶುಭ ಹಾರೈಸಿದರು. ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ವೇಳೆ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಹರೀಶ ಶೆಟ್ಟಿ, ಶಿಕ್ಷಕಿಯರಾದ ಅನಿತಾ ಡಿಸೋಜ, ಡೋರಾ ಡಿಸಿಲ್ವ, ಸುರೇಖ, ಸುಕನ್ಯಾ ರತ್ನ ಮತ್ತಿತರರು ಇದ್ದರು. ಮುಖ್ಯಶಿಕ್ಷಕ ಜೋಯಲ್ ಲೋಬೊ ಸ್ವಾಗತಿಸಿ, ಶಿಕ್ಷಕ ಸತೀಶ್ ಕುಮಾರ್ ವಂದಿಸಿದರು. ಶಿಕ್ಷಕ ಜಯಪ್ರಕಾಶ್ ಕೆ.ಎಸ್.ಕಾರ್ಯಕ್ರಮ ನಿರೂಪಿಸಿದರು.