ಬೆಳ್ಮಣ್ಣು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ರಜತ ಸಂಭ್ರಮದ ಸವಿ ನೆನಪಿಗಾಗಿ ತುಳು ಪರ್ಬ ಸಮಾರಂಭವು ಆದಿತ್ಯವಾರ ಜರಗಿತು. ತುಳು ಪರ್ಬ ಕಾರ್ಯಕ್ರಮದೊಂದಿಗೆ ತುಳು ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆದವು.
ಹಿರಿಯ ಸಾಹಿತಿಗಳು ಮತ್ತು ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಜನಾರ್ಧನ ಭಟ್ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದವರು ತುಳುವಿನ ಮೂಲವನ್ನು ಪ್ರಾಚೀನ ಕಾಲದಿಂದಲೂ ಗುರುತಿಸಬಹುದು. 2000 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ತುಳು ಭಾಷೆ ಹೊಂದಿದ್ದು, ತುಳು ಲಿಪಿಯಲ್ಲಿ ಬರೆಯಲಾದ ಮಹಾಕಾವ್ಯ ಮಹಾಭಾರತದ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ತುಳುವಿನ ಉಲ್ಲೇಖವಿದೆ ಎಂದು ಐತಿಹಾಸಿಕ ಮಹತ್ವವನ್ನು ನೆನಪಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಪಾಂಗಾಳ ಬಾಬು ಕೊರಗ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದವರು ತುಳುವರು ತುಳು ಭಾಷೆಯ ಆರಾಧನೆಯನ್ನು ನಡೆಸುತ್ತಿರುವುದು ಅಭಿಮಾನದ ವಿಷಯವಾಗಿದೆ. ನಮ್ಮ ನಾಡಿನ ಆಚಾರ, ವಿಚಾರವನ್ನು ತುಳು ಪರ್ಬದ ಮೂಲಕ ಆಚರಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ದಿನೇಶ್ ಪೂಜಾರಿ, ಕಾರ್ಯಕ್ರಮದ ನಿರ್ದೇಶಕಿ ಪುಷ್ಪ ಕುಲಾಲ್, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸರಬೈಲು ವೇದಿಕೆಯಲ್ಲಿ ಉಪಸ್ಥಿತಿತರಿದ್ದರು.
ತುಳು ಪರ್ಬದ ಅಂಗವಾಗಿ ಜರಗಿದ ತುಳು ಕವಿಗೋಷ್ಠಿಯಲ್ಲಿ ವಾಸಂತಿ ಅಂಬಲಪಾಡಿ, ಹರಿಪ್ರಸಾದ್ ನಂದಳಿಕೆ, ದೀಪಿಕಾ ಉಡುಪಿ, ಸುಲೋಚನಾ ಪಚ್ಚಿನಡ್ಕ, ಶ್ರೀ ಮುದ್ರಾಡಿ ಅವರು ಭಾಗವಹಿಸಿ ತುಳು ಕವನ ವಾಚನ ವಾಚಿಸಿದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ಕಾರ್ಯಕ್ರಮ ನಿರೂಪಿಸಿದರು. ಪದ್ಮಶ್ರೀ ಪೂಜಾರಿ ಮತ್ತು ಅನ್ನಪೂರ್ಣ ಕಾಮತ್ ಅವರು ಪ್ರಾರ್ಥನೆಗೈದರು. ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ ವಂದಿಸಿದರು.