ರಾಷ್ಟ್ರೀಯ ಹೆದ್ದಾರಿ ಯು-ಟರ್ನ್ ಏಕಪಕ್ಷೀಯವಾಗಿ ಬಂದ್: ಪರ್ಯಾಯ ಸರ್ವಿಸ್ ರಸ್ತೆ ಇಲ್ಲದೆ ಜನಜೀವನ ಅಸ್ತವ್ಯಸ್ತ – ತಕ್ಷಣ ಹಳೆಯ ವ್ಯವಸ್ಥೆ ಪುನಸ್ಥಾಪನೆಗೆ ಯೋಗಿಶ್ ಶೆಟ್ಟಿ ಜಪ್ಪು ಆಗ್ರಹ

0
21

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬರಿಬೈಲ್, ವ್ಯಾಸನಗರ, ಕೆಪಿಟಿ, ಯೆಯ್ಯಾಡಿ ಹಾಗೂ ಕುಂಟಿಕಾನ ವ್ಯಾಪ್ತಿಯ ಸಾವಿರಾರು ಜನರ ದಿನನಿತ್ಯದ ಜೀವನಕ್ಕೆ ತೀವ್ರ ತೊಂದರೆ ಉಂಟಾಗುವಂತೆ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಯು-ಟರ್ನ್ ಅನ್ನು ಯಾವುದೇ ಮುನ್ನೋಟಿಸ್, ಸಾರ್ವಜನಿಕ ಚರ್ಚೆ ಅಥವಾ ಪರ್ಯಾಯ ಸರ್ವಿಸ್ ರಸ್ತೆ ಒದಗಿಸದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಏಕಪಕ್ಷೀಯವಾಗಿ ಬಂದ್ ಮಾಡಿರುವ ಕ್ರಮವನ್ನು ತುಳುನಾಡ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರ ಅವರು, “ಸಾರ್ವಜನಿಕರ ಮೂಲಭೂತ ಸಂಚಾರ ಹಕ್ಕುಗಳನ್ನು ಕಡೆಗಣಿಸಿ ಕೈಗೊಂಡಿರುವ ಈ ಅಚಾತುರ್ಯ ನಿರ್ಧಾರ ತಕ್ಷಣ ಹಿಂಪಡೆಯಬೇಕು. ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ತೀರ್ಮಾನಗಳನ್ನು ಸಾರ್ವಜನಿಕರೊಂದಿಗೆ ಚರ್ಚಿಸದೇ ತೆಗೆದುಕೊಳ್ಳುವುದು ಸಂಪೂರ್ಣ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯು-ಟರ್ನ್ ಬಂದ್‌ನಿಂದ ತುರ್ತು ಸೇವೆಗೂ ಅಡ್ಡಿ

ಯು-ಟರ್ನ್ ಬಂದ್‌ನಿಂದಾಗಿ ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳಂತಹ ತುರ್ತು ಸೇವೆಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ವೃದ್ಧರು ದಿನನಿತ್ಯ ಅನಗತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆ, ಮಾರುಕಟ್ಟೆ ಸೇರಿದಂತೆ ಅಗತ್ಯ ಸೇವೆಗಳಿಗೆ ತೆರಳಲು ಜನರು ಹಲವು ಕಿಲೋಮೀಟರ್‌ಗಳ ಹೆಚ್ಚುವರಿ ಸುತ್ತು ಹಾಕಬೇಕಾಗಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ಇಂಧನ ವ್ಯಯ ಹೆಚ್ಚಾಗಿದ್ದು, ಆರ್ಥಿಕ ನಷ್ಟ, ಸಂಚಾರ ದಟ್ಟಣೆ ಹಾಗೂ ಅಪಘಾತಗಳ ಅಪಾಯವೂ ದಿನೇದಿನೇ ಹೆಚ್ಚುತ್ತಿದೆ ಎಂದು ಯೋಗಿಶ್ ಶೆಟ್ಟಿ ಜಪ್ಪುರ ಆತಂಕ ವ್ಯಕ್ತಪಡಿಸಿದ್ದಾರೆ.

ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ

“ಈ ಕ್ರಮವು ಸಂವಿಧಾನದ ಕಲಂ 21 ಅಡಿಯಲ್ಲಿ ಇರುವ ಸುರಕ್ಷಿತ ಜೀವನ ಹಾಗೂ ಸಂಚಾರ ಹಕ್ಕು, ಕಲಂ 19(1)(d) ರ ಸ್ವತಂತ್ರ ಸಂಚಾರ ಹಕ್ಕು ಮತ್ತು ಕಲಂ 14 ರ ಸಮಾನತೆ ಹಕ್ಕುಗಳಿಗೆ ಸ್ಪಷ್ಟ ಉಲ್ಲಂಘನೆಯಾಗಿದೆ. ಪರ್ಯಾಯ ವ್ಯವಸ್ಥೆ ಒದಗಿಸದೇ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸುವ ಯಾವುದೇ ಕ್ರಮ ಕಾನೂನುಬಾಹಿರ” ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕ ರಸ್ತೆಗಳ ಸಂರಕ್ಷಕ ಮಾತ್ರವಾಗಿದ್ದು, ಸಾರ್ವಜನಿಕ ಹಿತವನ್ನು ಬಲಿ ಕೊಟ್ಟು ಕಾನೂನು ನಡೆಸುವ ಹಕ್ಕು ಇಲ್ಲ. ಸರ್ವಿಸ್ ರಸ್ತೆ ಪೂರ್ಣಗೊಳ್ಳುವ ಮುನ್ನ ಯು-ಟರ್ನ್ ಬಂದ್ ಮಾಡಿರುವುದು ಹೆದ್ದಾರಿ ಯೋಜನಾ ನಿಯಮಗಳಿಗೆ ವಿರುದ್ಧವಾಗಿದೆ. ಸಾರ್ವಜನಿಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ, ಜಿಲ್ಲಾಡಳಿತ ಹಾಗೂ ಸಂಚಾರ ಪೊಲೀಸರ ಅನುಮೋದನೆ ಇಲ್ಲದೇ ಸಂಚಾರ ಬದಲಾವಣೆ ಮಾಡಿರುವುದು ಗಂಭೀರ ಲೋಪ ಎಂದು ಯೋಗಿಶ್ ಶೆಟ್ಟಿ ಜಪ್ಪುರ ಆರೋಪಿಸಿದ್ದಾರೆ.

ಕಾನೂನು-ಶಾಂತಿ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ

ಈ ಅವೈಜ್ಞಾನಿಕ ನಿರ್ಧಾರದಿಂದ ಸಂಚಾರ ಗೊಂದಲ, ರಸ್ತೆ ರೋಷ ಹಾಗೂ ಸಾರ್ವಜನಿಕ ಅಸಮಾಧಾನ ಹೆಚ್ಚುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಕಾನೂನು-ಶಾಂತಿ ಸಮಸ್ಯೆಗೆ ಕಾರಣವಾಗುವ ಅಪಾಯವಿದೆ. ಇದಕ್ಕೆ ಸಂಪೂರ್ಣ ಹೊಣೆ NHAI ಮೇಲೆಯೇ ಇರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಆಗ್ರಹ

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ :

• ಯು-ಟರ್ನ್ ಅನ್ನು ತಕ್ಷಣ ಪುನಃ ತೆರೆಯಲು ಅಥವಾ ಪರ್ಯಾಯ ಸರ್ವಿಸ್ ರಸ್ತೆ ಪೂರ್ಣಗೊಳ್ಳುವವರೆಗೂ ಹಳೆಯ ಸಂಚಾರ ವ್ಯವಸ್ಥೆಯನ್ನು ಮುಂದುವರಿಸಲು, ಜಿಲ್ಲಾಡಳಿತ, ಸಂಚಾರ ಪೊಲೀಸ್, NHAI ಹಾಗೂ ಸ್ಥಳೀಯ ನಿವಾಸಿಗಳ ಪ್ರತಿನಿಧಿಗಳೊಂದಿಗೆ ಸಂಯುಕ್ತ ಪರಿಶೀಲನೆ ನಡೆಸುವಂತೆ ಸೂಚಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರ ಆಗ್ರಹಿಸಿದ್ದಾರೆ.

ಅಂತಿಮ ತೀರ್ಮಾನಕ್ಕೆ ಮುನ್ನ ಸಾರ್ವಜನಿಕ ಸುರಕ್ಷತೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಹಳೆಯ ಸಂಚಾರ ವ್ಯವಸ್ಥೆಯನ್ನು ತಕ್ಷಣ ಪುನಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here