ಎನ್‌ಸಿಎಎಚ್‌ಪಿ ಪಠ್ಯಕ್ರಮ ಅನುಷ್ಠಾನ: ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ಹಾಗೂ ‘ಮಾಹೆ’ ವತಿಯಿಂದ ರಾಜ್ಯ ಮಟ್ಟದ ಕಾರ್ಯಾಗಾರ

0
4

ಮಣಿಪಾಲ್‌ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆಯಾದ ‘ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್’ (ಎಂಸಿಎಚ್‌ಪಿ) ಸಹಯೋಗದೊಂದಿಗೆ ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ (ಕೆಎಸ್‌ಎಎಚ್‌ಸಿ) ಫೆಬ್ರವರಿ 12ರ ಗುರುವಾರ ಆಯೋಜಿಸಿದ್ದ ‘ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಅಂಡ್ ಹೆಲ್ತ್‌ಕೇರ್ ಪ್ರೊಫೆಷನ್ಸ್’ (ಎನ್‌ಸಿಎಎಚ್‌ಪಿ) ಪಠ್ಯಕ್ರಮ ಅನುಷ್ಠಾನ ಕುರಿತಾದ ರಾಜ್ಯ ಮಟ್ಟದ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು.

2026-27ನೇ ಶೈಕ್ಷಣಿಕ ಸಾಲಿನಿಂದ ಕಡ್ಡಾಯವಾಗಿ ಜಾರಿಗೊಳ್ಳಲಿರುವ ‘ಸಾಮರ್ಥ್ಯ ಆಧಾರಿತ ಪಠ್ಯಕ್ರಮ’ಕ್ಕೆ ರಾಜ್ಯದಾದ್ಯಂತ ಇರುವ ಅಲೈಡ್ ಮತ್ತು ಹೆಲ್ತ್‌ಕೇರ್ ಶಿಕ್ಷಣ ಸಂಸ್ಥೆಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವು ಒಂದು ಪ್ರಮುಖ ಮೈಲಿಗಲ್ಲಾಗಿದೆ.

ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್‌ ಅವರು ಮಾತನಾಡಿ, ʼದೇಶದಲ್ಲಿನ ಅಲೈಡ್ ಹೆಲ್ತ್ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಮಣಿಪಾಲದ ಎಂಸಿಎಚ್‌ಪಿ ಸಹ ಒಂದಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಪ್ರಾಯೋಗಿಕ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಲ್ಲದೆ, ಶೈಕ್ಷಣಿಕ ಶ್ರೇಷ್ಠತೆ, ನಿಯಂತ್ರಕ ಮಾನದಂಡಗಳ ಪಾಲನೆ ಮತ್ತು ಆರೋಗ್ಯ ಶಿಕ್ಷಣದಲ್ಲಿ ಸಾಮರ್ಥ್ಯ ವೃದ್ಧಿಗೆ ಮಾಹೆ ಸದಾ ಒತ್ತು ನೀಡುತ್ತಿದೆʼ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ (ನಿವೃತ್ತ), ʼಈ ಕಾರ್ಯಾಗಾರದ ಗೋಷ್ಠಿಗಳು ಫಲಿತಾಂಶ ಆಧಾರಿತ ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಶಿಕ್ಷಣ ಸಂಸ್ಥೆಗಳಿಗೆ ಪ್ರಾಯೋಗಿಕ ಮಾರ್ಗದರ್ಶನ ಒದಗಿಸುವ ಅಗತ್ಯತೆಗಳಿಗೆ ಅನುಗುಣವಾಗಿ ರೂಪಿಸಲಾಗಿತ್ತುʼ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಬಿ. ಎಲ್. ಸುಜಾತಾ ರಾಥೋಡ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್‌ ಮತ್ತು ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ (ನಿವೃತ್ತ) ಸೇರಿದಂತೆ ಸಂಸ್ಥೆಯ ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷರಾದ ಪ್ರೊ. ಯು. ಟಿ. ಇಫ್ತಿಕಾರ್ ಅಲಿ ಫರೀದ್ ಮತ್ತು ಯೆನೆಪೋಯ (ಡಿಮ್ಡ್ ಟು ಬಿ ಯೂನಿವರ್ಸಿಟಿ) ಕುಲಪತಿ ಡಾ. ಗಂಗಾಧರ ಸೋಮಯಾಜಿ ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಗಳಾದ ಡಾ. ಶರತ್ ಕುಮಾರ್ ರಾವ್, ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ. ಶ್ರೀನಿವಾಸ್ ಮೂರ್ತಿ ಎಸ್.ಟಿ., ಮಾಹೆ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಮತ್ತು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ ಡೀನ್ ಆದ ಡಾ. ಜಿ. ಅರುಣ್ ಮೈಯ್ಯ ಉಪಸ್ಥಿತರಿದ್ದರು.

ಡಾ. ಬಿ. ಎಲ್. ಸುಜಾತಾ ರಾಥೋಡ್ ಅವರು ಮಾತನಾಡಿ, ‘ರಾಜ್ಯದ ಆರೋಗ್ಯ ಶಿಕ್ಷಣವನ್ನು ಜಾಗತಿಕ ಉತ್ತಮ ಗುಣಮಟ್ಟದ ಪದ್ಧತಿಗಳಿಗೆ ಅನುಗುಣವಾಗಿ ರೂಪಿಸುವಲ್ಲಿ ಈ ಕಾರ್ಯಾಗಾರವು ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಸಾಮರ್ಥ್ಯ ಆಧಾರಿತ ಶಿಕ್ಷಣಕ್ಕೆ ಬದಲಾಗುವುದರಿಂದ, ಅಲೈಡ್ ಹೆಲ್ತ್ ಪದವೀಧರರು ಕೇವಲ ಸೈದ್ಧಾಂತಿಕ ಜ್ಞಾನವನ್ನಷ್ಟೇ ಅಲ್ಲದೆ, ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಿರುವ ಸ್ಪಷ್ಟ ಮತ್ತು ವೃತ್ತಿಪರ ಕೌಶಲಗಳನ್ನು ಪಡೆಯುತ್ತಾರೆ’ ಎಂದರು.

ಸಂಸ್ಥೆಗಳ ಮುಖ್ಯಸ್ಥರು ಮತ್ತು ಹಿರಿಯ ಪ್ರಾಧ್ಯಾಪಕರಿಗಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಹೊಸ ಎನ್‌ಸಿಎಎಚ್‌ಪಿ ಚೌಕಟ್ಟನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಜಾರಿಗೆ ತರಲು ಇದು ಸಹಕಾರಿಯಾಗಿತ್ತು. ಶೈಕ್ಷಣಿಕ ತಜ್ಞರ ನೇತೃತ್ವದಲ್ಲಿ ನಡೆದ ತಾಂತ್ರಿಕ ಗೋಷ್ಠಿಗಳು ಪಠ್ಯಕ್ರಮದ ಮ್ಯಾಪಿಂಗ್, ಪಠ್ಯಕ್ರಮದ ಗುರಿಗಳು ಮತ್ತು ಕೋರ್ಸ್ ಫಲಿತಾಂಶಗಳ ಹೊಂದಾಣಿಕೆ, ಸಾಮರ್ಥ್ಯ ಆಧಾರಿತ ಶಿಕ್ಷಣದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದೃಷ್ಟಿಕೋನಗಳು ಹಾಗೂ ಮೌಲ್ಯಮಾಪನ ತಂತ್ರಗಳ ಕುರಿತು ಬೆಳಕು ಚೆಲ್ಲಿದವು. ಅಲ್ಲದೆ, ರೂಬ್ರಿಕ್ಸ್ ಮತ್ತು OSCE/OSPE ನಂತಹ ಸುಧಾರಿತ ಮೌಲ್ಯಮಾಪನ ಸಾಧನಗಳ ಬಳಕೆಯ ಬಗ್ಗೆಯೂ ಚರ್ಚಿಸಲಾಯಿತು.

ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷರಾದ ಪ್ರೊ. ಯು. ಟಿ. ಇಫ್ತಿಕಾರ್ ಅಲಿ ಫರೀದ್ ಅವರು ಮಾತನಾಡಿ, 2026-27ನೇ ಶೈಕ್ಷಣಿಕ ಸಾಲಿನಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳು NCAHP ಅನುಮೋದಿತ ಪಠ್ಯಕ್ರಮವನ್ನು ಕಡ್ಡಾಯವಾಗಿ ಜಾರಿಗೆ ತರುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಅಲ್ಲದೆ, ರಾಜ್ಯದ ಅಲೈಡ್ ಮತ್ತು ಹೆಲ್ತ್‌ಕೇರ್ ವೃತ್ತಿಪರರ ಗುಣಮಟ್ಟವನ್ನು ಕಾಪಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಕೌನ್ಸಿಲ್‌ನ ಪಾತ್ರವನ್ನು ಅವರು ಪುನರುಚ್ಚರಿಸಿದರು.

ಮಣಿಪಾಲದ ಎಂಸಿಎಚ್‌ಪಿ ಡೀನ್ ಡಾ. ಜಿ. ಅರುಣ್ ಮೈಯ್ಯ ಅವರು ಕಾರ್ಯಾಗಾರದ ಉದ್ದೇಶಗಳನ್ನು ವಿವರಿಸಿದರು. ಹೊಸ ಪಠ್ಯಕ್ರಮ ಜಾರಿಗೊಳ್ಳುತ್ತಿರುವ ಈ ಪರಿವರ್ತನೆಯ ಹಂತದಲ್ಲಿ ಇತರೆ ಸಂಸ್ಥೆಗಳಿಗೆ ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಕಾರವನ್ನು ನೀಡಲು ಎಂಸಿಎಚ್‌ಪಿ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಕರ್ನಾಟಕದಾದ್ಯಂತ ಅಲೈಡ್ ಮತ್ತು ಹೆಲ್ತ್‌ಕೇರ್ ವೃತ್ತಿಪರರಿಗೆ ಏಕರೂಪದ ಮಾನದಂಡಗಳು ಮತ್ತು ಉತ್ತಮ ಗುಣಮಟ್ಟದ ತರಬೇತಿಯನ್ನು ಖಚಿತಪಡಿಸಿಕೊಳ್ಳಲು, ಎನ್‌ಸಿಎಎಚ್‌ಪಿ ಪಠ್ಯಕ್ರಮವನ್ನು ಎಲ್ಲೆಡೆ ಜಾರಿಗೆ ತರುವ ನಿರ್ಧಾರದೊಂದಿಗೆ ಕಾರ್ಯಾಗಾರವು ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here