ಮಂಗಳೂರು ಜ.1 : ಜಾಗೃತ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.), ಜಪ್ಪು, ಮಂಗಳೂರು ವತಿಯಿಂದ “ಅವೇಕ್ ಕುಡ್ಲ” ಪರಿಕಲ್ಪನೆಯಡಿಯಲ್ಲಿ ನವ ಜಾಗೃತಿ ಕಾರ್ಯಕ್ರಮಕ್ಕೆ ಗುರುವಾರ ಬೆಳಿಗ್ಗೆ ಹೊಯ್ಗೆ ಬಜಾರ್‌ನ ಚಿನ್ಮಯ ಮಿಷನ್ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ರಾಮಕೃಷ್ಣ ಮಠ, ಮಂಗಳೂರುದ ಸ್ವಾಮಿ ಯುಗೇಶಾನಂದಜೀ ಅವರು ಉದ್ಘಾಟಿಸಿ, ಸ್ಥಳೀಯ ಸಮಸ್ಯೆಗಳ ಪರಿಹಾರದಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದೆಂದು ತಿಳಿಸಿದರು. ರೊಸಾರಿಯೋ ಚರ್ಚ್‌ನ ಫಾದರ್ ವಲೇರಿಯನ್ ಡಿಸೋಜಾ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತೆ ಶ್ರೀಮತಿ ರೇಖಾ ಶೆಟ್ಟಿ ಅವರು ಸ್ವಚ್ಛತೆ ಮತ್ತು ನಾಗರಿಕ ಜವಾಬ್ದಾರಿಯ ಕುರಿತು ಸಂದೇಶ ನೀಡಿದರು. ಮಾಜಿ ಕಾರ್ಪೊರೇಟರ್ ಲತೀಫ್ ಅವರು ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿ ಸಾರ್ವಜನಿಕ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಬ್ಲಾಕ್ ಸ್ಪಾಟ್ ತೆರವು ಕಾರ್ಯ- ಹೊಯ್ಗೆ ಬಜಾರ್ ರೈಲ್ವೆ ಗೇಟ್‌ನಿಂದ ಗೂಡ್ಸ್ ಶೆಡ್‌ನ ಅಯ್ಯಪ್ಪ ಮಂದಿರವರೆಗೆ ಫುಟ್‌ಪಾತ್‌ನಲ್ಲಿ ಸಂಗ್ರಹವಾಗಿದ್ದ ಕಟ್ಟಡ ತ್ಯಾಜ್ಯವನ್ನು ಮಹಾನಗರ ಪಾಲಿಕೆಯ ಜೆಸಿಬಿ ಹಾಗೂ ತ್ಯಾಜ್ಯ ವಾಹನಗಳ ಮೂಲಕ ತೆರವುಗೊಳಿಸಲಾಯಿತು. ರಸ್ತೆ ಬದಿಯ ಗಿಡ-ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಗಿಡ ನೆಟ್ಟು ಸುಂದರೀಕರಣ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು.
ಮನೆ–ಮಳಿಗೆಗಳಿಗೆ ಜಾಗೃತಿ : ಹೊಯ್ಗೆ ಬಜಾರ್, ಪೋರ್ಟ್ ಹಾಗೂ ಪಾಂಡೇಶ್ವರ ವಾರ್ಡುಗಳ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಸಂಚಾರ ನಿಯಮಗಳ ಕರಪತ್ರಗಳನ್ನು ವಿತರಿಸಲಾಯಿತು. ಮೂಲಭೂತ ಸೌಕರ್ಯ ಸಮಸ್ಯೆಗಳ ಕುರಿತು ನೇರ ಸಂಪರ್ಕಕ್ಕೆ ಪ್ಲೇ ಕಾರ್ಡ್‌ಗಳನ್ನು ನೀಡಲಾಯಿತು.
ಅಪಾಯಕಾರಿ ಸ್ಥಳಗಳ ದುರಸ್ತಿ : ಸೋಮನಾಥ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿದ್ದ ಎರಡು ಅಪಾಯಕಾರಿ ಹೊಂಡಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ದುರಸ್ತಿ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಜಾಗೃತಿ : ಅತ್ತಾವರ ವಾರ್ಡಿನ ಸರ್ಕಾರಿ ಪ್ರೌಢಶಾಲೆಯ 100 ವಿದ್ಯಾರ್ಥಿಗಳಿಗೆ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಹಾಗೂ ಜೀವನ ಮೌಲ್ಯಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಪೇಪರ್ ಮಾಸ್ಕ್ ತಯಾರಿಕೆ, ಕಿರುಚಿತ್ರ ಪ್ರದರ್ಶನ ಮತ್ತು ಪಿಪಿಟಿ ಮೂಲಕ ಮಾಹಿತಿ ನೀಡಲಾಯಿತು.
ಸಂಚಾರ ನಿರ್ವಹಣೆಗೆ ಕ್ರಮ : ಹೊಯ್ಗೆ ಬಜಾರ್ ರೈಲ್ವೆ ಗೇಟ್ ಬಳಿ ಉಂಟಾಗುವ ಸಂಚಾರ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಟ್ರಾಫಿಕ್ ಬ್ಯಾರಿಕೇಡ್ಸ್ ಅಳವಡಿಸಲಾಯಿತು. ಸಹಾಯಕ ಪೊಲೀಸ್ ಆಯುಕ್ತೆ ಶ್ರೀಮತಿ ನಜ್ಮಾ ಫಾರೂಕಿ ಅವರು ಸ್ಥಳ ಪರಿಶೀಲನೆ ನಡೆಸಿದರು.
ಹಸುರೀಕರಣ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ : ಲೀವೆಲ್ ಹೈಟ್ಸ್ ಅಪಾರ್ಟ್‌ಮೆಂಟ್ ಎದುರು ಪ್ರದೇಶವನ್ನು ಸ್ವಚ್ಛಗೊಳಿಸಿ ಗಿಡಗಳನ್ನು ನೆಡಲಾಯಿತು. ಸೆಂಟ್ರಲ್ ಬಸ್ ಸ್ಟ್ಯಾಂಡ್ ಹಾಗೂ ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆ ಮತ್ತು ಸಂಚಾರ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮ ಸಂಯೋಜನೆಯನ್ನು ಪುನೀತ್ ಪೂಜಾರಿ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸೀತಾರಾಮ ಎ ಅವರ ಸಂಪೂರ್ಣ ಸಹಕಾರದೊಂದಿಗೆ ಪ್ರಧಾನ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್ ಅವರ ಉಸ್ತುವಾರಿಯಲ್ಲಿ “ಅವೇಕ್ ಕುಡ್ಲ” ಪರಿಕಲ್ಪನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳಿಗೆ ವಿಸ್ತರಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ ಎಂದು ತಿಳಿಸಲಾಯಿತು.

ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.), ಜಪ್ಪು, ಮಂಗಳೂರು.

