ಮೂಡುಬಿದಿರೆ: ಇಲ್ಲಿನ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ತಡೆಯಲು ಈ ಹಿಂದೆ ಇದ್ದ ನಿಯಮಗಳನ್ನು ಪರಿಷ್ಕರಿಸಿ, ಮೂರು ತಿಂಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಗುರುವಾರ ಸಾಯಂಕಾಲ ಇಂದಿರಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.

ಪುರಸಭೆ, ಪೊಲೀಸ್ ಇಲಾಖೆ, ಬಸ್ ಮಾಲಕರ ಸಂಘ ಹಾಗೂ ಬಾಡಿಗೆದಾರರ ಜಂಟಿ ಸಭೆಯಲ್ಲಿ ಬಸ್ ನಿಲ್ದಾಣದ ಅವ್ಯವಸ್ಥೆಗಳ ಕುರಿತು ಚರ್ಚೆ ನಡೆಯಿತು.
ಪುರಸಭೆ ಉಪಾಧ್ಯಕ್ಷ ನಾಗಾರಾಜ ಪೂಜಾರಿ ಮಾತನಾಡಿ, ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಲು ಜಾಗವಿಲ್ಲ. ಖಾಸಗಿ ವಾಹನಗಳಿಂದ ಹೆಚ್ಚಿನ ತೊಂದರೆಯಾಗುತ್ತಿದೆ. ಅದಲ್ಲದೆ ಅಂಗಡಿಯವರು ಜನರು ಓಡಾಡುವ ಜಾಗವನ್ನು ಒತ್ತುವರಿ ಮಾಡಿರುವುದರಿಂದ ಪ್ರಯಾಣಿಕರು ಕೂಡ ತೊಂದರೆ ಅನುಭವಿಸುವಂತಾಗಿದೆ ಎನ್ನುವ ದೂರುಗಳು ನಮಗೆ ಬಂದಿದೆ. ಖಾಸಗಿ ವಾಹನಗಳ ದಟ್ಟನೆಯನ್ನು ನಿಯಂತ್ರಿಸಲು, ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ವಾಣಿಜ್ಯ ಸಂಕೀರ್ಣದ ಎದುರು ಕೇವಲ ಒಂದು ಲೈನ್‌ನಲ್ಲಿ ಗ್ರಾಹಕರ ದ್ವಿಚಕ್ರ ವಾಹನಗಳಿಗೆ ಮಾತ್ರ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸುತ್ತೇವೆ. ಅಂಗಡಿಯ ಬಾಡಿಗೆದಾರರಿಗೆ ಸಂಬಂಧಿಸಿದಂತಹ ದ್ವಿಚಕ್ರವಾಹನಗಳನ್ನು ಸಾರ್ವಜನಿಕ ಶೌಚಗೃಹದ ಸುತ್ತಮುತ್ತ ನಿಲ್ಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಅಂಗಡಿಯವರು ಒತ್ತುವರಿ ಮಾಡಿದ ಜಾಗವನ್ನು ಎರಡು ದಿನಗಳಲ್ಲಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸೋಮವಾರದಿಂದ ತೆರವು ಕಾರ್ಯಾಚರಣೆ ಮಾಡುತ್ತೇವೆ ಎಂದರು.

ಕೆನರಾ ಬಸ್ ಮಾಲಕರ ಸಂಘದ ಮೂಡುಬಿದಿರೆ ವಲಯ ಅಧ್ಯಕ್ಷ ನಾರಾಯಣ ಪಿ.ಎಂ ಮಾತನಾಡಿ, ಜಿಲ್ಲೆಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧವಿದೆ. ಆದರೆ ಮೂಡುಬಿದಿರೆಯಲ್ಲಿ ಬಸ್ ನಿಲ್ದಾಣದಲ್ಲಿ ಬಹುತೇಕ ಜಾಗದಲ್ಲಿ ಖಾಸಗಿ ವಾಹನಗಳೇ ಇರುತ್ತವೆ. ಖಾಸಗಿ ವಾಹನಗಳನ್ನು ಇಲ್ಲಿ ನಿಲ್ಲಿಸುವುದಾದರೇ ನಮಗೆ ಬಸ್ ನಿಲ್ದಾಣಕ್ಕೆ ಬೇರೆ ಜಾಗ ಕೊಡಿ. ಶೀಘ್ರದಲ್ಲಿ ಯಾವ ಜಾಗದಲ್ಲಿ ಯಾವ ಬಸ್ ನಿಲುತ್ತದೆ ಎಂಬುವುದರ ಮಾಹಿತಿಯನ್ನು ಒದಗಿಸುತ್ತೇವೆ ಎಂದರು.
ಮುಖ್ಯಾಧಿಕಾರಿ ಇಂದು ಎಂ., ಬಸ್ ನಿಲ್ದಾಣದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು. ಬಸ್ ಮಾಲಕ ಸಂಘದವರು, ಬಾಡಿಗೆದಾರರು, ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮಾತನಾಡಿ, ಪುರಸಭೆಯವರು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದಲ್ಲಿ ಶೀಘ್ರವೇ ನಾವು ಕಾರ್ಯಪ್ರವೃತ್ತರಾಗುತ್ತೇವೆ. ನಗರದಲ್ಲಿ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರು.
ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಬಸ್ ಮಾಲಕರ ಸಂಘದ ಪದಾಧಿಕಾರಿ ನವೀನ್ ಹೆಗ್ಡೆ, ಶಶಿ ಅಮೀನ್, ಬಾಡಿಗೆದಾರರಾದ ಪ್ರದೀಪ್, ಶರೀಫ್, ಅಶ್ರಪ್ ವಾಲ್ಪಾಡಿ, ಪ್ರಸನ್ನ, ಶೇಖರ್ ಸಲಹೆ ನೀಡಿದರು. ಕಂದಾಯ ನಿರೀಕ್ಷಕಿ ಜ್ಯೋತಿ ಎಚ್., ಪುರಸಭೆ ಇಂಜಿನಿಯರ್ ನಳಿನ್ ಕುಮಾರ್ ಪಿ. ಉಪಸ್ಥಿತರಿದ್ದರು.

