ಆಧಾರ್ ಕಾರ್ಡ್ ಇದೆ..” ಎಂದು ಹೇಳಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಹತ್ತಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ದಿನಗಳು ಇನ್ನೇನು ಮುಗಿಯಲಿವೆ. ರಾಜ್ಯದ ಮಹಿಳೆಯರಿಗೆ ಸಂಜೀವಿನಿಯಾಗಿರುವ ‘ಶಕ್ತಿ’ ಯೋಜನೆಗೆ ಇನ್ಮುಂದೆ ಕೇವಲ ಗುರುತಿನ ಚೀಟಿ ತೋರಿಸಿದರೆ ಸಾಲದು, ಸರ್ಕಾರ ನೀಡುವ ‘ಶಕ್ತಿ ಸ್ಮಾರ್ಟ್ ಕಾರ್ಡ್’ (Shakti Smart Card) ನಿಮ್ಮ ಬಳಿ ಇರಲೇಬೇಕು.
ಇಷ್ಟು ದಿನ “ಸ್ಮಾರ್ಟ್ ಕಾರ್ಡ್ ಬರುತ್ತೆ” ಎಂಬ ಸುದ್ದಿ ಮಾತ್ರವಿತ್ತು. ಆದರೆ ಈಗ ಖುದ್ದು ರಾಜ್ಯ ಸಚಿವ ಸಂಪುಟವೇ ಇದಕ್ಕೆ ಹಸಿರು ನಿಶಾನೆ ತೋರಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲು ಅಧಿಕೃತ ಒಪ್ಪಿಗೆ ನೀಡಲಾಗಿದೆ.
ಯೋಜನೆ ಜಾರಿಯಾದಾಗಿನಿಂದಲೂ ಮಹಿಳೆಯರು ಆಧಾರ್ ಕಾರ್ಡ್ ಮತ್ತು ಫೋಟೋ ಐಡಿ ತೋರಿಸಿ ಶೂನ್ಯ ದರದ ಟಿಕೆಟ್ ಪಡೆಯುತ್ತಿದ್ದಾರೆ. ಆದರೆ, ಇದರಲ್ಲಿ ಸಾಕಷ್ಟು ಗೊಂದಲಗಳಿವೆ. ಆಧಾರ್ ಕಾರ್ಡ್ ಅಸ್ಪಷ್ಟವಾಗಿರುವುದು, ಫೋಟೋ ಮ್ಯಾಚ್ ಆಗದಿರುವುದು ಮತ್ತು ಅನ್ಯ ರಾಜ್ಯದವರು ನಕಲಿ ಐಡಿ ತೋರಿಸಿ ಪ್ರಯಾಣಿಸುವಂತಹ ಪ್ರಕರಣಗಳು ನಿರ್ವಾಹಕರ ಗಮನಕ್ಕೆ ಬಂದಿವೆ. ಹೀಗಾಗಿ, “ಆಧಾರ್ ತೋರಿಸಿದ್ರೆ ಆಗಲ್ಲ, ಸ್ಮಾರ್ಟ್ ಕಾರ್ಡ್ ಬೇಕೇಬೇಕು” ಎಂಬ ನಿಯಮ ಜಾರಿಗೆ ತರಲು ಸರ್ಕಾರ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಸಂಪೂರ್ಣ ಹೈಟೆಕ್ ಆಗಿರಲಿದೆ. ನಿರ್ವಾಹಕರ ಬಳಿ ಇರುವ ಟಿಕೆಟ್ ಮಷಿನ್‌ಗೆ (ETM) ಈ ಸ್ಮಾರ್ಟ್ ಕಾರ್ಡ್ ಅನ್ನು ಸ್ಪರ್ಶಿಸಿದರೆ (Tap) ಮಾತ್ರ ಉಚಿತ ಟಿಕೆಟ್ ಜನರೇಟ್ ಆಗುತ್ತದೆ. ಕೇವಲ ಕಣ್ಣಿನ ಅಂದಾಜಿನಲ್ಲಿ ಐಡಿ ಕಾರ್ಡ್ ನೋಡಿ ಟಿಕೆಟ್ ಕೊಡುವ ಪದ್ಧತಿ ರದ್ದಾಗಲಿದೆ. ಇದರಿಂದ ನಿಜವಾದ ಫಲಾನುಭವಿಗಳು ಯಾರು ಎಂಬುದು ನಿಖರವಾಗಿ ತಿಳಿಯಲಿದ್ದು, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಸೋರಿಕೆ ತಪ್ಪಲಿದೆ.
ಬಸ್ ಹತ್ತಿದಾಗ ತಡಕಾಡುವುದು ತಪ್ಪಬೇಕೆಂದರೆ ನೀವು ಇಂದೇ ಎಚ್ಚೆತ್ತುಕೊಳ್ಳಬೇಕು. ಸೇವಾ ಸಿಂಧು ಪೋರ್ಟಲ್ ಅಥವಾ ಸರ್ಕಾರಿ ಗ್ಯಾರಂಟಿ ಯೋಜನೆಗಳ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡು ಈ ಕಾರ್ಡ್ ಪಡೆಯಬಹುದು. ವಿಶೇಷವೆಂದರೆ, ಸರ್ಕಾರವೇ ಇದನ್ನು ಉಚಿತವಾಗಿ ನೀಡುತ್ತಿರುವುದರಿಂದ ಪ್ರಯಾಣಿಕರು ಹಣ ಕೊಡುವ ಅಗತ್ಯವಿಲ್ಲ ಎನ್ನಲಾಗಿದೆ.
ಕೇವಲ ಆಧಾರ್ ನಂಬಿಕೊಂಡು ಯೋಜನೆ ನಡೆಸಿದ್ದರಿಂದ ಲೆಕ್ಕಾಚಾರದಲ್ಲಿ ಏರುಪೇರಾಗುತ್ತಿದೆ ಎಂಬುದು ಸಾರಿಗೆ ಇಲಾಖೆಯ ವಾದ. ಈಗಾಗಲೇ 500 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯಾಣಿಸಿದ್ದು, ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಬರಬೇಕಾದ ಬಾಕಿ ಮೊತ್ತವೇ 4,220 ಕೋಟಿ ರೂಪಾಯಿ ದಾಟಿದೆ. ನಿಖರವಾದ ಲೆಕ್ಕ ಸಿಗಬೇಕೆಂದರೆ ‘ಸ್ಮಾರ್ಟ್ ಕಾರ್ಡ್’ ಅನಿವಾರ್ಯವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕಂಡಕ್ಟರ್ ಬಳಿ ಜಗಳವಾಡುವ ಬದಲು, ಈಗಲೇ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುವುದು ಜಾಣತನ!

