ಮದುವೆಯ ಉಡುಪಿನಲ್ಲೇ ನವ ದಂಪತಿಯ ದಾರುಣ ಅಂತ್ಯ

0
10

ಭೂಪಾಲ್‌ : ಪ್ರೀತಿಯಲ್ಲಿ ಒಂದಾಗಿದ್ದ ಯುವ ಜೋಡಿಯೊಂದು ಮದುವೆಯ ಉಡುಪಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಂಭವಿಸಿದೆ.

ಮೃತ ಮಹಿಳೆ ಸುಮಾರು ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದರು ಎಂಬ ವಿಷಯ ಮರಣೋತ್ತರ ಪರೀಕ್ಷೆಯ ವೇಳೆ ಬಯಲಾಗಿದ್ದು, ಈ ದುರಂತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಮೃತರನ್ನು 22 ವರ್ಷದ ರಾಜೇಂದ್ರ (ಗೋಲು) (Rajendra) ಮತ್ತು ಅವರ ಪತ್ನಿ 21 ವರ್ಷದ ಕಾಜಲ್ ಪಟೇಲ್ (Kajal Patel) ಎಂದು ಗುರುತಿಸಲಾಗಿದೆ. ಕಾಜಲ್ ಮದುವೆಯ ಸೀರೆಯನ್ನು ಧರಿಸಿದ್ದರೆ, ರಾಜೇಂದ್ರ ವರನ ಸೂಟ್ ಧರಿಸಿದ್ದರು. ಮನೆಯ ಫ್ಯಾನ್‌ಗೆ ಒಂದೇ ಹಗ್ಗದಲ್ಲಿ ಇಬ್ಬರೂ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ಅತ್ಯಂತ ಸಂತೋಷವಾಗಿ ಜೀವನ ನಡೆಸುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬುಧವಾರ ರಾತ್ರಿ ಎಂದಿನಂತೆ ಕುಟುಂಬದವರೊಂದಿಗೆ ರಾತ್ರಿ ಊಟ ಮುಗಿಸಿದ ದಂಪತಿ ತಮ್ಮ ಕೋಣೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಬಹಳ ಹೊತ್ತಾದರೂ ಅವರು ಹೊರಬಾರದಿದ್ದಾಗ, ಅನುಮಾನಗೊಂಡ ರಾಜೇಂದ್ರನ ತಂದೆ ಕೋಣೆಯ ಬಳಿ ಹೋಗಿ ನೋಡಿದ್ದಾರೆ. ಈ ವೇಳೆ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪಂಚನಾಮೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರೇಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.

ಕರ್ತವ್ಯನಿರತ ವೈದ್ಯ ಡಾ. ಪ್ರಶಾಂತ್ ಹಜಾರಿ ಅವರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಇದು ನೇಣು ಹಾಕಿಕೊಂಡಿದ್ದರಿಂದ ಸಂಭವಿಸಿದ ಸಾವು ಎಂದು ತಿಳಿದುಬಂದಿದೆ. ಅಲ್ಲದೆ, ಕಾಜಲ್ ಸುಮಾರು 45 ದಿನಗಳ ಗರ್ಭಿಣಿಯಾಗಿದ್ದರು ಎಂದು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ.

ಸಾಗರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಸಿನ್ಹಾ ಮಾತನಾಡಿ, “ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳಿಲ್ಲ. ಮದುವೆಯ ಉಡುಪಿನಲ್ಲೇ ಈ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದಿದ್ದಾರೆ.

ರೇಲಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಶರ್ಮ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಎಲ್ಲ ಆಯಾಮಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here