ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಂದರು ಪಟ್ಟಣ ಭಟ್ಕಳವನ್ನು ಇನ್ನು 24 ಗಂಟೆಯಲ್ಲಿ ಸ್ಫೋಟ ಮಾಡುವುದಾಗಿ ಈ-ಮೇಲ್ ಬಂದ ಹಿನ್ನಲೆಯಲ್ಲಿ ಕಳೆದು ಕೆಲವು ದಿನಗಳಿಂದ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕ್ವಾಡ್ ನಗರದಾದ್ಯಂತ ತಪಾಸಣೆ ನಡೆಸುತ್ತಿದೆ. ಇದರ ನಡುವೆ ಸೈಬರ್ ವಿಭಾಗದ ಸಹಾಯದಿಂದ ಈ ಮೇಲ್ ಮೂಲವನ್ನೂ ಪತ್ತೆ ಹಚ್ಚಲಾಗಿದೆ.
ಹುಸಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ನಿತಿನ್ ಶರ್ಮಾ ಅಲಿಯಾಸ್ ಖಾಲಿದ್‌ನನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರಕನ್ನಡ ಜಿಲ್ಲಾ ಎಸ್ಪಿ ಎಂ.ನಾರಾಯಣ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೊನೆಗೂ 40 ವರ್ಷದ ಅರೋಪಿ ಸಿಕ್ಕಿಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಭಟ್ಕಳ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ. ಪಿಎಸ್ಐಗಳಾದ ನವೀನ್ ಎಸ್. ನಾಯ್ಕ್, ಸೋಮರಾಜ ರಾಠೋಡ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.
ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ 351(4), 353(1) (b) BNS ಪ್ರಕರಣದಲ್ಲಿ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ ಎನ್ನಲಾಗಿದೆ. ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಆರೋಪಿ ನಿತಿನ್ ಅಲಿಯಾಸ್ ಖಾಲಿದ್ ವಿಚಾರಣಾ ಕೈದಿಯಾಗಿದ್ದಾನೆ.
ಆರೋಪಿ ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ಮೂಲತಃ ದೆಹಲಿಯವನಾಗಿದ್ದು ಆರೋಪಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾನೋ ಇಲ್ಲವೋ ಎಂದು ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ. BNS ಕಾಯ್ದೆ 351(4)ಅಡಿಯಲ್ಲಿ ಬಾಡಿ ವಾರೆಂಟ್ ಪಡೆದು ಭಟ್ಕಳ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಈಗಾಗಲೇ ಆರೋಪಿ ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ವಿರುದ್ಧ 16 ಪ್ರಕರಣಗಳು ದಾಖಲಾಗಿದೆ. ಕೇರಳದಲ್ಲಿ 6, ಕರ್ನಾಟಕದಲ್ಲಿ 3, ಪುದುಚೇರಿಯಲ್ಲಿ 2, ದೆಹಲಿ, ಮಧ್ಯಪ್ರದೇಶ, ಉತ್ತರಾಖಂಡ್, ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ 1 ತಲಾ ಒಂದು ಪ್ರಕರಣ ದಾಖಲಾಗಿದೆ.
2016-17ರಲ್ಲಿ ದೆಹಲಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿ 1 ವರ್ಷ ಜೈಲಿನಲ್ಲಿದ್ದ. ಪ್ರತಿಯೊಂದು ಕಡೆಯೂ ಹುಸಿಬಾಂಬ್ ಸ್ಫೋಟಿಸುವ ಬೆದರಿಕೆಯ ಈ-ಮೇಲ್‌ಅನ್ನು ಖಾಲಿದ್ ಹಾಕುತ್ತಿದ್ದ ಎನ್ನಲಾಗಿದೆ.