ಉಡುಪಿ : ಆನ್‌ಲೈನ್ ಸಾಲ ನೀಡುವುದಾಗಿ ನಂಬಿಸಿ ಕುವೈತ್ ನಲ್ಲಿರುವ ಅನಿವಾಸಿ ಕನ್ನಡಿಗರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಶಿರ್ವದ ಸ್ಟಾನ್ಲಿ ಪಿರೇರಾ (57) ಎಂಬವರು ಕುವೈತ್‌ನಲ್ಲಿ ವಾಸವಾಗಿದ್ದು ಇವರು ಮೊಬೈಲ್‌ನ ಟೆಲಿಗ್ರಾಂ ಆಪ್‌ನಲ್ಲಿ ಲೋನ್ ಬಗ್ಗೆ ಜಾಹೀರಾತು ನೋಡಿದ್ದರು. ಇವರನ್ನು ಅಪರಿಚಿತ ವ್ಯಕ್ತಿ ಟೆಲಿಗ್ರಾಂ ಗ್ರೂಪ್‌ವೊಂದಕ್ಕೆ ಸೇರಿಸಿದ್ದು, ಸ್ಟಾನ್ಲಿ ತನಗೆ 75,00,000 ರೂ. ಸಾಲ ಬೇಕಾಗಿರುವುದಾಗಿ ಸಂದೇಶದಲ್ಲಿ ತಿಳಿಸಿದ್ದರು.
ಅದಕ್ಕೆ ಅಪರಿಚಿತ ವ್ಯಕ್ತಿ ಶೇ.0.5ರಂತೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ತಿಳಿಸಿದ್ದು, ಅದಕ್ಕೆ ಮೊದಲಿಗೆ ಟ್ಯಾಕ್ಸ್ ಆಗಿ 5,00,000ರೂ. ಹಣ ಭರಿಸು ವಂತೆ ಆತ ತಿಳಿಸಿದ್ದನು. ಅದರಂತೆ ಸ್ಟಾನ್ಲಿ, ಅಪರಿಚಿತ ವ್ಯಕ್ತಿ ತಿಳಿಸಿದ ಭಾರತದಲ್ಲಿರುವ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಡಿ.23 ರಿಂದ ಡಿ.31ವರೆಗೆ ಒಟ್ಟು 21,66,769ರೂ. ಹಣವನ್ನು ವರ್ಗಾಯಿಸಿದರು. ಆದರೆ ಆರೋಪಿ ಈವರೆಗೆ ಇವರಿಗೆ ಸಾಲ ಅಥವಾ ಆತನಿಗೆ ವರ್ಗಾಯಿಸಿದ ಹಣವನ್ನಾಗಲೀ ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.

