ನಾನ್ ವೆಜ್” ತುಳು ಚಲನ ಚಿತ್ರ ಫೆಬ್ರವರಿ 6ರಂದು ತೆರೆಗೆ

0
30

ಮಂಗಳೂರು : ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಕೆ ಸೂರಜ್ ಶೆಟ್ಟಿ ನಿರ್ದೇಶನದ ನಾನ್ ವೆಜ್ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.

ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ “ನಾನ್‌ವೆಜ್‌” ಒಂದು ಅತ್ಯುತ್ತಮ ಭಿನ್ನ ಕಥಾವಸ್ತುವನ್ನು ಹೊಂದಿದೆ. ಯಾವುದನ್ನು ಮಡಿಮೈಲಿಗೆ, ಅಸಹ್ಯ ಎಂದು ಪರಿಗಣಿಸಿದ್ದೇವೆಯೋ ಅದು ಎಷ್ಟು ಅನಿವಾರ್ಯ ಮತ್ತು ಸಹಜ ಎಂಬುದು ಈ ಚಿತ್ರದ ಒಂದು ಸಂದೇಶವೂ ಆಗಿದೆ.

ಸು ಫ್ರಂ ಸೋ” ಸಿನಿಮಾದಲ್ಲಿ ನಟಿಸಿರುವ ಹೆಚ್ಚಿನ ಕಲಾವಿದರು “ನಾನ್‌ವೆಜ್‌” ಸಿನಿಮಾದಲ್ಲೂ ಇದ್ದಾರೆ. ಪ್ರಕಾಶ್ ತೂಮಿನಾಡು, ಬಂದರೊ ಬಂದರು ಬಾವಾ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳೂರು, ದೀಪಕ್‌ ರೈ ಪಾಣಾಜೆ, ಮೈಮ್‌ ರಾಮದಾಸ್‌, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ಅವರು ನಾನ್‌ವೆಜ್‌ ಸಿನಿಮಾದಲ್ಲೂ ನಟಿಸಿದ್ದಾರೆ. ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ದಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ತಮ್ಮ ಅದ್ಭುತ ನಟನಾ ಕೌಶಲವನ್ನು ಪ್ರದರ್ಶಿಸಿದ್ದಾರೆ.

ಜತೆಗೆ ಕುಸೇಲ್ದರಸೆ ನವೀನ್‌ ಡಿ. ಪಡೀಲ್‌ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಕೆಲವು ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎಂದೇ ಗುರುತಿಸಿಕೊಂಡಿರುವ ಅಥರ್ವ ಪ್ರಕಾಶ್‌ ಕೂಡ ನಾನ್‌ವೆಜ್‌ನ ಪ್ರಮುಖ ಪಾತ್ರದಲ್ಲಿದ್ದು, ಈ ಸಿನಿಮಾ ಭರ್ಜರಿ ಹಿಟ್‌ ಆಗುವ ನಿರೀಕ್ಷೆ ಇದೆ. ಹಾಸ್ಯಕ್ಕೂ ಕೊರತೆಯಿಲ್ಲ, ಮನೋರಂಜನೆಯೂ ಕಡಿಮೆ ಇಲ್ಲ, ಸಂದೇಶ – ಕಥೆಯೂ ಅದ್ಭುತ ಎಂಬುದು ಚಿತ್ರತಂಡದ ಮಾತು.

ನಾನ್‌ವೆಜ್‌ನ ವಿಷಯವೇ ಎಲ್ಲರಿಗೂ ಖುಷಿ ಕೊಡಲಿದೆ. ಪ್ರೀತಿಯ ಹಿಂದೆ ಹೋಗುತ್ತಿರುವ ಮುಗ್ಧ ಯುವಕನೊಬ್ಬನ ಸುತ್ತ ಹೆಣೆದಿರುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಆದ ಕಾರಣ ಇದು ಯುವ ಸಮುದಾಯವನ್ನು ಸೆಳೆಯುವ ಸಾಧ್ಯತೆ ನಿಚ್ಚಳವಾಗಿದೆ. ಮಕ್ಕಳೊಂದಿಗೆ ಹೆತ್ತವರು ಜತೆಯಾಗಿ ಕುಳಿತು ನೋಡಬೇಕಾದ ಸಿನಿಮಾವಾಗಿದ್ದು, ಇದು ಮಕ್ಕಳು ದಾರಿ ತಪ್ಪುವುದನ್ನು ತಡೆಯಲಿದೆ.
ಇಡೀ ಸಿನಿಮಾದ ಕಥೆ ಹಾಗೂ ಸಂದೇಶವನ್ನು ಹಾಸ್ಯದಲ್ಲೇ ತೆಗೆದುಕೊಂಡಿರುವ ಹೋಗಿರುವುದು ಒಂದು ದೊಡ್ಡ ಪ್ಲಸ್‌ ಪಾಯಿಂಟ್‌. ಯುವಜನತೆಯ ತಳಮಳ, ಗೊಂದಲ, ಕುತೂಹಲ ಗಳನ್ನು ಮನಸ್ಪರ್ಶಿಯಾಗಿ ಚಿತ್ರಿಸಲಾಗಿದೆ. ಅದಕ್ಕೊಂದು ಸುಂದರ ಕಥೆಯ ರೂಪ, ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನೂ ನೀಡಲಾಗಿದೆ. “ನಾನ್ ವೆಜ್” ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

LEAVE A REPLY

Please enter your comment!
Please enter your name here