ಬೆಂಗಳೂರು : ಗ್ರಾಮೀಣ ಭಾಗದ ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಕೃಷಿ ಭೂಮಿಯಲ್ಲಿ ನಿರ್ಮಿಸಲಾದ ಮನೆಗಳಿಗೂ ಅಧಿಕೃತ ದಾಖಲೆ ನೀಡಲು ಸರ್ಕಾರ ಹಾದಿ ಸುಗಮಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಂಡಿಸಿದ ಸೂಚನೆಗೆ ಉತ್ತರಿಸಿದ ಸಚಿವರು ಈ ಮಾಹಿತಿ ನೀಡಿದರು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಈ ಐತಿಹಾಸಿಕ ಕ್ರಮ ಕೈಗೊಳ್ಳಲಾಗಿದೆ.
ಗ್ರಾಮೀಣ ವಸತಿ ಯೋಜನೆಗಳಡಿ ತಮ್ಮದೇ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಇ-ಸ್ವತ್ತು (E-Swathu) ಪಡೆಯಲು ಇದ್ದ ತಾಂತ್ರಿಕ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ.2025ರ ಏಪ್ರಿಲ್ 7ಕ್ಕಿಂತ ಮೊದಲು ಕೃಷಿ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಈ ಸೌಲಭ್ಯ ಅನ್ವಯಿಸಲಿದೆ.
ಗ್ರಾಮ ಪಂಚಾಯಿತಿಗಳ ತೆರಿಗೆ ದರ ಮತ್ತು ಶುಲ್ಕಗಳ ನಿಯಮದನ್ವಯ ಸಾರ್ವಜನಿಕರು ಈಗ ‘ನಮೂನೆ 11 ಬಿ’ ದಾಖಲೆಯನ್ನು ಅಧಿಕೃತವಾಗಿ ಪಡೆಯಬಹುದಾಗಿದೆ. ಈ ತಿದ್ದುಪಡಿಯಿಂದಾಗಿ ಕೃಷಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕಾನೂನುಬದ್ಧ ದಾಖಲೆ ಸಿಗಲಿದ್ದು, ಆಸ್ತಿಯ ಹಕ್ಕು ಭದ್ರವಾಗಲಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

