ಅ.12 : ತುಳು ಭವನದಲ್ಲಿ ಲೀಲಾವತಿ ಬೈಪಾಡಿತ್ತಾಯ ಸಂಸ್ಮರಣಾ ಗೋಷ್ಠಿ ಹಾಗೂ ಮಹಿಳಾ ಯಕ್ಷಗಾನ ಪ್ರದರ್ಶನ

0
53

ಮಂಗಳೂರು : ವೃತ್ತಿಪರ ಯಕ್ಷಗಾನ ಮೇಳದ ಪ್ರಥಮ ಮಹಿಳಾ ಭಾಗವತರಾದ ದಿವಂಗತ ಲೀಲಾವತಿ ಬೈಪಾಡಿತ್ತಾಯ ಅವರ ಸಂಸ್ಮರಣಾ ಗೋಷ್ಠಿ ಹಾಗೂ ಅವರ ಶಿಷ್ಯ ವೃಂದದ ಮಹಿಳಾ ಕಲಾವಿದರಿಂದ ತುಳು ಯಕ್ಷಗಾನ ಪ್ರದರ್ಶನ ಅ.12 ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಉರ್ವಸ್ಟೋರಿನ ತುಳು ಭವನದಲ್ಲಿ ನಡೆಯಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಹಿರಿಯ ಯಕ್ಷಗಾನ ವಿದ್ವಾಂಸರಾದ ಡಾ.ಎಂ. ಪ್ರಭಾಕರ ಜೋಶಿ ಅವರು ಸಂಸ್ಮರಣಾ ಉಪನ್ಯಾಸ ಮಾಡುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಉರ್ವ ಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಎಸ್. ಸುರೇಂದ್ರ ರಾವ್ , ಮಾಜಿ ಮೇಯರ್ ಶಶಿಧರ ಹೆಗ್ಡೆ , ಯಕ್ಷಗಾನ ಗುರುಗಳು ಹಾಗೂ ಲೀಲಾವತಿಯವರ ಪತಿ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿಯವರ ಪುತ್ರ ಅವಿನಾಶ್ ಬೈಪಾಡಿತ್ತಾಯ ಉಪಸ್ಥಿತರಿರುವರು.

ಲೀಲಾವತಿಯವರ ಶಿಷ್ಯ ನಾದಾ ಮಣಿನಾಲ್ಕೂರು ಅವರು ಬೈಪಾಡಿತ್ತಾಯ ಅವರ ಜೊತೆಗಿನ ಮೇಳದ ತಿರುಗಾಟದ ನೆನಪುಗಳ ಕುರಿತು ಮಾತನಾಡಿ, ಲೀಲಾವತಿ ಬೈಪಾಡಿತ್ತಾಯ ಅವರ ಶೈಲಿಯ ಯಕ್ಷಗಾನದ
ಹಾಡನ್ನು ಪ್ರಸ್ತುತಪಡಿಸುವರು . ಸಂಸ್ಮರಣಾ ಗೋಷ್ಠಿ ಬಳಿಕ ಪೂರ್ಣಿಮಾ ಯತೀಶ್ ರೈ ನಿರ್ದೇಶನದ ‘ತ್ಯಾಗೊದ ತಿರ್ಲ್ ‘ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ ಹಾಗೂ ಶಾಲಿನಿ ಹೆಬ್ಬಾರ್ ಪಾಲ್ಗೊಳ್ಳುವವರು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here