ಹಳೆಯಂಗಡಿ: ದೇಶವ್ಯಾಪಿ ನಡೆಯುತ್ತಿರುವ ಮೂರು ತಿಂಗಳ ಆರ್ಥಿಕ ಸೇರ್ಪಡೆ ಹಾಗೂ ಜನ ಸುರಕ್ಷಾ ಅಭಿಯಾನದ ಭಾಗವಾಗಿ ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯ ಕಾರ್ಯಕ್ರಮವನ್ನು ಶೈಲೇಂದ್ರ ಶೀಥ್ ಡಿಜಿಎಂ ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರು ಉದ್ಘಾಟಿಸಿ ಸರ್ಕಾರದ ಯೋಜನೆಗಳನ್ನು ಜನರಿಗೆ ಪಡೆಯಲು ಖಾತೆಯನ್ನು ಸಕ್ರಿಯವಾಗಿ ಉಳಿಸಲು ಕೆವೈಸಿ ನವೀಕರಿಸವುದು ಅಗತ್ಯ, ಜನ ಸುರಕ್ಷಾ ಯೋಜನೆಗಳು ಹಾಗೂ ಸುರಕ್ಷಿತ ಡಿಜಿಟಲ್ ವ್ಯವಹಾರದ ಜ್ಞಾನ ಸಂಪಾದನೆ ಇಂದಿನ ಅಗತ್ಯತೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ವಹಿಸಿ, ಜನ ಸುರಕ್ಷಾ ಯೋಜನೆ ಭವಿಷ್ಯದಲ್ಲಿ ಉಂಟಾಗಬಹುದಾದ ಅನಿಶ್ಚಿತತೆ ಹಾಗೂ ಆರ್ಥಿಕ ನಷ್ಟಕ್ಕೆ ಭದ್ರತೆಯನ್ನು ಒದಗಿಸಲು ಸಹಕಾರಿ ಇಂತಹ ಯೋಜನೆಗಳ ಮಾಹಿತಿ ನೊಂದಣಿ ಕಾರ್ಯಕ್ರಮ ನಡೆಸುತ್ತಿರುವ ಕೆನರಾ ಬ್ಯಾಂಕ್ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲತಾ ಕುರುಪು ಡಿಜಿಎಂ, ಪ್ರಾದೇಶಿಕ ವ್ಯವಸ್ಥಾಪಕರು ಪ್ರಾದೇಶಿಕ ಕಛೇರಿ ಕೆನರಾ ಬ್ಯಾಂಕ್ ಮಂಗಳೂರು ಭಾಗವಹಿಸಿ , ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ “ಕೆನರಾ ವಿದ್ಯಾ ಜ್ಯೋತಿ” ಸೌಲಭ್ಯಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ, ಕೆನರಾ ಬ್ಯಾಂಕ್ ಸಂಸ್ಥಾಪಕರ ಆಶಯದಂತೆ ವಿದ್ಯಾರ್ಥಿನಿಯರಿಗೆ ಪ್ರತಿ ಕೆನರಾ ಬ್ಯಾಂಕ್ ಶಾಖೆಯ ಮೂಲಕ ಆಯ್ದ ಪ್ರತಿಭಾವಂತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನದ ಮುಖೇನ ಪ್ರೋತ್ಸಾಹ ನೀಡುತ್ತಿದೆ , ವಿವಿಧ ಬ್ಯಾಂಕ್ ಸೇವಾ ಸೌಲಭ್ಯಗಳ ಅರಿವು ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ಲತಾ.ಎಮ್ ಪ್ರಾದೇಶಿಕ ವ್ಯವಸ್ಥಾಪಕರು ಎಸ್ ಬಿ ಐ ಪ್ರಾದೇಶಿಕ ಕಛೇರಿ ಮಂಗಳೂರು ನಾಮನಿರ್ದೇಶನ (ನಾಮಿನಿ) ಔಚಿತ್ಯದ ಬಗ್ಗೆ ತಿಳಿಸಿದರು. ಅಭಿಯಾನದ ಆಶಯ ಹಾಗೂ ಯೋಜನೆಗಳ ಮಹತ್ವದ ಬಗ್ಗೆ ಕವಿತಾ ಎನ್. ಶೆಟ್ಟಿ , ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರು ದಕ್ಷಿಣ ಕನ್ನಡ ಜಿಲ್ಲೆ ಇವರು ತಿಳಿಸಿದರು, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ, ಸುಕನ್ಯಾ ಸಮೃದ್ಧಿ, ಸುರಕ್ಷಿತ ಡಿಜಿಟಲ್ ವ್ಯವಹಾರದ ಕ್ರಮಗಳ ಮಾಹಿತಿಯನ್ನು ಲತೇಶ್ ಬಿ. ಸಮಾಲೋಚಕರು ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಮಂಗಳೂರು ಇವರು ನೀಡಿದರು , ಅನುಶ್ರೀ ಶಾಖಾ ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಹಳೆಯಂಗಡಿ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ, ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.