ಆ.10ರಂದು ದುಬಾಯಿ ತಂಡದಿಂದ ಕಟೀಲು ಕ್ಷೇತ್ರದಲ್ಲಿ ಗೆಜ್ಜೆ ಸೇವೆ- ಮಣಿಕಂಠ ಮಹಿಮೆ ಯಕ್ಷಗಾನ ಪ್ರದರ್ಶನ

0
34

ಯು ಎ ಇ – ಮಧ್ಯಪ್ರಾಚ್ಯದ ಏಕೈಕ ಮತ್ತು ಸರ್ವಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರ,ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ, ಕೇಂದ್ರದ ದಶಮಾನೋತ್ಸವ ಸಂವತ್ಸರದ ಸವಿನೆನಪಿನಲ್ಲಿ ಕಟೀಲು ಶ್ರೀದೇವಿ ಸನ್ನಿಧಿಯಲ್ಲಿ ಗೆಜ್ಜೆ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಪ್ರಯುಕ್ತ ಇದೇ ಬರುವ ತಾರೀಕು ಅಗಸ್ಟ್ 10ನೇ ಆದಿತ್ಯವಾರದಂದು, ಶ್ರೀ ದೇವಿ ಸನ್ನಿಧಿಯಲ್ಲಿ ಕೇಂದ್ರದ ಭಾಗವತಿಕೆ ಗುರುಗಳಾದ  ಶ್ರೀಮತಿ ಭವ್ಯಶ್ರೀ ಕುಲ್ಕುಂದ ಇವರ ನಿರ್ದೇಶನದಲ್ಲಿ ಕೇಂದ್ರದ ಕಲಿಕಾ ವಿದ್ಯಾರ್ಥಿಗಳಿಂದ ಯಕ್ಷ ಗಾನಾರ್ಚನೆ ನಡೆಯಲಿದೆ. ಮಾತ್ರವಲ್ಲದೆ ಅದೇ ದಿನ ಮಧ್ಯಾಹ್ನ 1.50 ರಿಂದ, ಕಟೀಲು ರಥಬೀದಿಯ ಶ್ರೀ ಸರಸ್ವತೀ ಸದನದಲ್ಲಿ ಕೀರ್ತಿಶೇಷ ಬಲಿಪ ನಾರಾಯಣ ಭಾಗವತ ವಿರಚಿತ ಭಸ್ಮಾಸುರ ಮೋಹಿನೀ ಮತ್ತು ಶ್ರೀ ವಿಶ್ವ ವಿನೋದ ಬನಾರಿ ವಿರಚಿತ ಶ್ರೀ ಶಬರಿಮಲೈ ಅಯ್ಯಪ್ಪ ಮಹಾತ್ಮ್ಯೆ ಆಧಾರಿತ ಕನ್ನಡ ಪೌರಾಣಿಕ ಪ್ರಸಂಗ ಮಣಿಕಂಠ ಮಹಿಮೆ ಯಕ್ಷಗಾನ ಪ್ರದರ್ಶನವನ್ನು ಕೇಂದ್ರದ ಗುರುಗಳಾದ ಶ್ರೀಯುತ ಶೇಖರ್ ಡಿ. ಶೆಟ್ಟಿಗಾರ್ ನಿರ್ದೇಶನದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಯುತ ಶರತ್ ಕುಡ್ಲ ನಾಟ್ಯ ನಿರ್ದೇಶನ ಮಾಡಲಿದ್ದಾರೆ. ಹಿಮ್ಮೇಳದಲ್ಲಿ ಅತಿಥಿ ಕಲಾವಿದರಾಗಿ ಸರ್ವಶ್ರೀಗಳಾದ ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್‌ ಕಕ್ಕೆಪದವು, ಚಿನ್ಮಯ ಭಟ್ ಕಲ್ಲಡ್ಕ, ಭವ್ಯಶ್ರೀ ಹರೀಶ್‌ ಕಲ್ಕುಂದ, ದಯಾನಂದ ಶೆಟ್ಟಿಗಾರ್ ಮಿಜಾರು, ವಿಘ್ನೇಶ್ ಎಸ್ ಶೆಟ್ಟಿಗಾರ್‌ ರ್ಕನ್ನಿಗೋಳಿ, ಮನ್ವಿತ್ ಎಸ್ಪದ್ಮಶಾಲಿ ಇವರು ಭಾಗವಹಿಸಲಿದ್ದಾರೆ.

     ಇದೇ ಶುಭಾವಸರದಲ್ಲಿ ಪ್ರಖ್ಯಾತ ಕಲಾವಿದರೂ, ಯಕ್ಷಗಾನ ಪ್ರಾಚಾರ್ಯರಾದ ಶ್ರೀಯುತ ಕರ್ಗಲ್ಲು ವಿಶ್ವೇಶ್ವರ ಭಟ್, ಹಿಮ್ಮೇಳ ಗುರುಗಳಾದ ಶ್ರೀಯುತ ಮುರಳೀಧರ ಭಟ್ ಕಟೀಲು, ನಿವೃತ್ತ ಪ್ರಖ್ಯಾತ ಪುಂಡುವೇಷಧಾರಿಗಳಾದ ಶ್ರೀಯುತ ಕೃಷ್ಣ ಶೆಟ್ಟಿ ಮುಂಡ್ಕೂರು, ಇವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಕೇದ್ರ ಪ್ರಾಯೋಜಿತ “ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ” ನೀಡಿ ಗೌರವಿಸಲಾಗುವುದು. ಅಲ್ಲದೆ ದಿವಂಗತ ಆನಂದ ಕಟೀಲು ಇವರಿಗೆ ಮರಣೋತ್ತರ ಯಕ್ಷ ಶ್ರೀ ರಕ್ಷಾ ಗೌರವ ಧನ ನೀಡಿ ಗೌರವಿಸಲಾಗುವುದು. ಇದೇ ಸಂಧರ್ಭದಲ್ಲಿ ಕೇಂದ್ರ ನಡೆದು ಬಂದ ದಾರಿಯ ಕುರಿತಾದ ಪಕ್ಷಿನೋಟ “ಯಕ್ಷ ದರ್ಪಣ” ಬಿಡುಗಡೆಯೂ ಆಗಲಿದೆ.

     ಉದ್ಘಾಟನಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ದೀಪ ಪ್ರಜಲ್ವನೆ ಮಾಡಲಿದ್ದಾರೆ. ತಮ್ಮ ದಿವ್ಯ ಉಪಸ್ಥಿತಿಯ ಮೂಲಕ ಆಶೀರ್ವಚನ ನೀಡಲಿರುವವರು ಶ್ರೀ ವೇಂಕಟರಮಣ ಆಸ್ರಣ್ಣಅನುವಂಶಿಕ ಅರ್ಚಕರು ಶ್ರೀಕ್ಷೇತ್ರ ಕಟೀಲು ಮತ್ತು ಶ್ರೀ ಜನನೀದಾಸ, ಆಧ್ಯಾತ್ಮ ಗುರು ರಾಮಕೃಷ್ಣ ಆಶ್ರಮ ಪೊಳಲಿ ಇವರು.

ಪ್ರಶಸ್ತಿ ಪ್ರದಾನ -ಸಭಾ ಕಾರ್ಯಕ್ರಮದಲ್ಲಿ ಸಭಾ ಅಧ್ಯಕ್ಷತೆವಹಿಸಲಿರುವವರು, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ,ಡಾ. ತಲ್ಲೂರು ಶಿವರಾಮ ಶೆಟ್ಟಿಯವರು. ಆಶೀರ್ವಚನ ನೀಡಲಿದ್ದಾರೆ ವಿದ್ವಾನ್ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣರು, ಅನುವಂಶಿಕ ಅರ್ಚಕರು, ಶ್ರೀ ಕ್ಷೇತ್ರ ಕಟೀಲು, ಪ್ರಧಾನ ಅಭ್ಯಾಗತರಾಗಿ ಬರೋಡದ ಖ್ಯಾತ ಉದ್ಯಮಿ ಶ್ರೀಯುತ ಶಶಿಧರ ಶೆಟ್ಟಿ, ಬರೋಡ, ಯುಗಪುರುಷ ಕಿನ್ನಿಗೋಳಿಯ ಸಂಪಾದಕರಾದ ಶ್ರೀಯುತ ಕೆ.ಭುವನಾಭಿರಾಮ ಉಡುಪ, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀಯುತ ಕೆ.ಮಿಥುನ ಉಡುಪ ಇವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಿರೂಪಣೆಯನ್ನು ಡೈಜಿವರ್ಲ್ಡ್ ಇದರ ನಿರೂಪಕರಾದ ಶ್ರೀಯುತ ಚೇತನ್ ಶೆಟ್ಟಿ ನಡೆಸಿಕೊಡಲಿದ್ದಾರೆ, ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರದ ಸಂಚಾಲಕರಾದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿ ಮತ್ತು ಕೇಂದ್ರದ ಮಾಧ್ಯಮ ಪ್ರಚಾರಕರಾದ ಶ್ರೀಯುತ ಗಿರೀಶ್ ನಾರಾಯಣ ಕಾಟಿಪಳ್ಳ ತಿಳಿಸಿ ಸರ್ವ ಕಲಾಭಿಮಾನಿಗಳ ಸಹಕಾರವನ್ನು ಬಯಸಿದ್ದಾರೆ.

LEAVE A REPLY

Please enter your comment!
Please enter your name here