ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು..!

0
77

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮನೆಯೊಳಗೆ ಆಟವಾಡುತ್ತಿದ್ದ ಪುಟ್ಟ ಮಗುವೊಂದು ಆಯತಪ್ಪಿ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದು, ಪ್ರಸ್ತುತ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.

ನಾಯಂಡಹಳ್ಳಿಯಲ್ಲಿ ವಾಸವಾಗಿರುವ ನವೀನ್ ಮತ್ತು ಜಯಶ್ರೀ ದಂಪತಿಯ ಒಂದೂವರೆ ವರ್ಷದ ಪುತ್ರಿ ಸಹನಾ ಏಪ್ರಿಲ್ 6ರಂದು ಮನೆಯಲ್ಲಿ ಆಟವಾಡುತ್ತಿದ್ದಳು. ಆಟದ ಭರದಲ್ಲಿ ಮನೆಯ ಮುಖ್ಯ ಬಾಗಿಲು ದಾಟಿ ಹೊರಬಂದ ಮಗು, ವರಾಂಡದಲ್ಲಿ ನಿಯಂತ್ರಣ ತಪ್ಪಿ ನೇರವಾಗಿ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದೆ.

ಮಗು ಮೇಲೆಂದ ಕೆಳಕ್ಕೆ ಬೀಳುತ್ತಿದ್ದಂತೆಯೇ ತಲೆಗೆ ಗಂಭೀರ ಗಾಯಗಳಾಗಿವೆ. ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ತಾಯಿ ಜಯಶ್ರೀ, ಆಘಾತ ತಾಳಲಾರದೆ ರಸ್ತೆಯಲ್ಲೇ ಮೂರ್ಛೆ ಹೋಗಿದ್ದಾರೆ.

ಮಗುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಬಸವನಗುಡಿಯ ರಂಗದೊರೈ ಆಸ್ಪತ್ರೆಯ ಐಸಿಯು (ICU) ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಪೋಷಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಈ ದಂಪತಿಗೆ ಸಹನಾ ಏಕೈಕ ಪುತ್ರಿ. ಪ್ರಸ್ತುತ ಮಗುವಿನ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ.

ಘಟನೆಯ ಕುರಿತು ಮಗುವಿನ ತಂದೆ ನವೀನ್‌ ಮಾತನಾಡಿದ್ದು, ‘ಮನೆಯ ಮೊದಲನೇ ಮಹಡಿಯಿಂದ ಮಗು ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಮಗು ಬಿದ್ದ ತಕ್ಷಣ ಅದರ ತಲೆಗೆ ಗಾಯವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅದೃಷ್ಟವಶಾತ್ ತಲೆಯನ್ನು ಹೊರತುಪಡಿಸಿ ದೇಹದ ಬೇರೆ ಯಾವುದೇ ಭಾಗಕ್ಕೆ ಪೆಟ್ಟಾಗಿಲ್ಲ. ಮಗುವಿನ ತಲೆಗೆ ಮೂರು ಹೊಲಿಗೆಗಳನ್ನು (Stitches) ಹಾಕಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಮಗು ಈಗ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ” ಎಂದು ಆಟೋ ಚಾಲಕರಾಗಿರುವ ನವೀನ್ ತಿಳಿಸಿದ್ದಾರೆ.

ಘಟನೆ ನಡೆದ ಸಮಯದ ಬಗ್ಗೆ ವಿವರಿಸಿದ ಅವರು, “ನನ್ನ ಪತ್ನಿ ಅಡುಗೆ ಮನೆಯಲ್ಲಿ ಹಾಲು ಕಾಯಿಸಲು ಇಟ್ಟಿದ್ದರು. ಹಾಲಿನ ಉರಿ ಕಡಿಮೆ ಮಾಡಲು ಅವರು ಅಡುಗೆ ಮನೆಗೆ ಹೋದ ಕೆಲವೇ ಕ್ಷಣಗಳಲ್ಲಿ ಈ ಅನಾಹುತ ಸಂಭವಿಸಿದೆ. ಮನೆಯ ಹೊರಗಡೆ ಒಂದು ಕುರ್ಚಿ ಇತ್ತು, ಮಗು ಆಟವಾಡುತ್ತಾ ಆ ಕುರ್ಚಿಯ ಮೇಲೆ ಹತ್ತಿದಾಗ ಆಯತಪ್ಪಿ ಕೆಳಕ್ಕೆ ಬಿದ್ದಿದೆ. ನಮಗೆ ಇರುವುದು ಇದೊಂದೇ ಮಗು. ಮಗು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ನನ್ನ ಪತ್ನಿಗೆ ಆಘಾತವಾಗಿ, ಬಿಪಿ ಕಡಿಮೆಯಾಗಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದರು. ಈಗ ಪತ್ನಿ ಮತ್ತು ಮಗು ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಇದು” ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here