ಉಡುಪಿ: ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿವಾದಾತ್ಮಕ ವಿಷಯಗಳನ್ನು ಪ್ರಸ್ತುತಪಡಿಸಿ ಜನರ ದಾರಿ ತಪ್ಪಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಸಾಧನೆ ಜೊತೆಗೆ ವಿಷಯಾಧಾರಿತ ಚುನಾವಣೆಯಿಂದ ಮಾತ್ರ ಗೆಲ್ಲಲು ಸಾಧ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಹೆಸರಿನಲ್ಲಿ ಬಿಜೆಪಿ ಮತ ಕೇಳುತ್ತಿದೆ. ಆದರೆ ಹೆಣ್ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ನೀಡಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿಗೆ ಪಾಕಿಸ್ತಾನ, ಮುಸ್ಲಿಂ ಬಿಟ್ಟರೆ ಬೇರೆ ವಿಷಯಗಳಿಲ್ಲ. ದೇಶಕ್ಕೆ ಶೇ.50ರಷ್ಟು ಕ್ರೂಡ್ ಆಯಿಲ್ ಮಧ್ಯಪ್ರಾಚ್ಯದ ಮುಸ್ಲಿಂ ದೇಶಗಳಿಂದ ಬರುತ್ತದೆ. 40 ರಿಂದ 50 ಲಕ್ಷ ಜನ ಗಲ್ಫ ರಾಷ್ಟ್ರಗಳಲ್ಲಿದ್ದಾರೆ. ಎನ್ಡಿಎ ಸರ್ಕಾರ 23 ಸಾರ್ವಜನಿಕರಂಗ ಕಂಪೆನಿಗಳನ್ನು ಖಾಸಗಿಕರಣ ಮಾಡಿದೆ. ಕೇಂದ್ರ ಸರ್ಕಾರ ಪ್ರಚಾರಕ್ಕಾಗಿ 6 ಸಾವಿರ ಕೋಟಿ ರೂ. ವಿನಿಯೋಗಿಸಿದೆ. ಈ ಎಲ್ಲಾ ವಿಚಾರಗಳನ್ನು ಯುವಜನತೆಗೆ ತಿಳಿಸಬೇಕು ಎಂದರು.
ವಿಪ ಸದಸ್ಯ ಮಂಜುನಾಥ ಭಂಡಾರಿ ಮತ್ತು ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಪೂರ್, ಕೆಪಿಸಿಸಿ ವಕ್ತಾರ ಅನಿಲ್ ಕುಮಾರ್, ಲಾವಣ್ಯ ಬಲ್ಲಾಳ್, ನಗರ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಷಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮುಳವಳ್ಳಿ , ರಾಜು ಪೂಜಾರಿ, ದಿನೇಶ್ ಪುತ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ , ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯೆ ಜ್ಯೋತಿ ಹೆಬ್ಬಾರ್, ವೋಟ್ ಚೋರಿ ಅಭಿಯಾನ ಸಂಚಾಲಕ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಸಹಕಾರಿ ಕಾಂಗ್ರೆಸ್ ಅಧ್ಯಕ್ಷರಾದ ಅಣ್ಣಯ್ಯ ಸೇರಿಗಾರ್ ಮತ್ತು ಜಿಲ್ಲಾ ವಕ್ತಾರರಾದ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.