ಬಂಟ್ವಾಳ: ಅವಿಭಜಿತ ಜಿಲ್ಲೆಯ ಬಹುತೇಕ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಬೆಳವಣಿಗೆಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಧರ್ಮಸ್ಥಳ ಕ್ಷೇತ್ರ ಮತ್ತು ದೇಶದೆಲ್ಲೆಡೆ ವಿವಿಧ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಅಲ್ಲಿನ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಕೆಲವೊಂದು ಧರ್ಮ ವಿರೋಧಿಗಳು ನಡೆಸುತ್ತಿರುವ ಅಪಪ್ರಚಾರ ಮತ್ತು ಅವಹೇಳನ ವಿರುದ್ಧ ಜನರ ತಾಳ್ಮೆಯ ಕಟ್ಟೆಯೊಡೆದಿದೆ. ಇದರಿಂದಾಗಿ ಲಕ್ಷಾಂತರ ಮಂದಿ ಭಕ್ತರಿಗೆ ಅನ್ನ ಮತ್ತು ಅಕ್ಷರ ನೀಡಿದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನ ಮಾಡಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರನ್ನು ಜೈಲಿಗೆ ಅಟ್ಟಬೇಕು ಅಥವಾ ಗಡೀಪಾರು ಮಾಡಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಆಗ್ರಹಿಸಿದ್ದಾರೆ.
ಇಲ್ಲಿನ ಧರ್ಮ ರಕ್ಷಣಾ ವೇದಿಕೆ ವತಿಯಿಂದ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಬುಧವಾರ ನಡೆದ ಜನಾಗ್ರಹ ಸಭೆ ಬಳಿಕ ಬಿ.ಸಿ.ರೋಡು ಆಡಳಿತ ಸೌಧ ಎದುರು ಸೇರಿದ್ದ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸುಳ್ಳಿನ ಮುಖವಾಡ ಹೊತ್ತ ಮುಸುಕುಧಾರಿಗೆ ರಾಜ ರ‍್ಯಾದೆ ನೀಡಿದ ಸರ್ಕಾರದ ಕ್ರಮ ನಾಚಿಕೆಗೇಡು. ಆ ಮುಸುಕುಧಾರಿಯನ್ನು ಕೂಡಲೇ ಜನತೆಯ ಮುಂದಿಡಬೇಕು. ಧಾರ್ಮಿಕ ಕ್ಷೇತ್ರ ಮತ್ತು ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ ಮತ್ತು ಅವಹೇಳನ ನಡೆಸುವ ಮೂಲಕ ಕೋಟ್ಯಾಂತರ ಮಂದಿ ಭಕ್ತರ ಧಾರ್ಮಿಕ ನಂಬಿಕೆಯೊAದಿಗೆ ಚೆಲ್ಲಾಟವಾಡಿದ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣನವರ್, ಜಯಂತ ಟಿ., ಸಂತೋಷ್ ಶೆಟ್ಟಿ, ಸಮೀರ್ ಎಂ.ಡಿ., ಅಜಯ್ ಅಂಚನ್, ರವೀಂದ್ರ ಶೆಟ್ಟಿ ಮತ್ತು ಇವರ ಸಹಚರರನ್ನು ಬಂಧಿಸಿ ಅವರಿಗೆ ಬಂದಿರುವ ಆರ್ಥಿಕ ಸಂಪನ್ಮೂಲ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದರು.
ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ, ‘ಸಮುದ್ರ ಮಥನದಲ್ಲಿ ಅಂತಿಮವಾಗಿ ದೇವತೆಗಳಿಗೆ ಅಮೃತ ದೊರೆತಂತೆ ಅಸತ್ಯ ಮರೆಯಾಗಿ ಸತ್ಯಕ್ಕೆ ಜಯವಾಗಲಿದೆ’. ‘ನನ್ನಂತಹ ಲಕ್ಷಾಂತರ ಮಂದಿ ಕಲಾವಿದರಿಗೆ ಬೆಳಕು ನೀಡಿರುವ ಧರ್ಮಸ್ಥಳ ಮತ್ತು ಮತ್ತು ಧರ್ಮಾಧಿಕಾರಿ ವಿರುದ್ಧ ಅವಾಚ್ಯವಾಗಿ ನಿಂದಿಸಿ ಅಪ ಪ್ರಚಾರ ನಡೆಸಿದವರು ರಾಕ್ಷಸ ವಂಶ್ಥರು’ ಎಂದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎನ್.ಪ್ರಕಾಶ ಕಾರಂತ್, ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್, ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ್ ಮಾತನಾಡಿ, ‘ಈ ಪ್ರಕರಣವನ್ನು ಎನ್ ಐ ಎ ತನಿಖೆಗೆ ಒಳಪಡಿಸಬೇಕು. ಆ ಮೂಲಕ ಈ ಷಡ್ಯಂತ್ರದ ಹಿನ್ನೆಲೆ ಬಯಲಾಗಬೇಕು’ ಎಂದು ಆಗ್ರಹಿಸಿದರು.
ಕಣಿಯೂರು ಮಹಾಬಲ ಸ್ವಾಮೀಜಿ, ಪ್ರಮುಖರಾದ ಕೆ.ಕೃಷ್ಣಕುಮಾರ್ ಪೂಂಜ, ಸುಲೋಚನಾ ಜಿ.ಕೆ.ಭಟ್, ಬಿ.ಪದ್ಮಶೇಖರ ಜೈನ್, ಎಂ. ತುಂಗಪ್ಪ ಬಂಗೇರ, ಟಿ.ಹರೀಂದ್ರ ಪೈ ನೈನಾಡು, ಮಾಣಿಕ್ಯರಾಜ್ ಜೈನ್, ಆರ್.ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ರೊನಾಲ್ಡ್ ಡಿಸೋಜ, ಜಗನ್ನಾಥ ಸಾಲಿಯಾನ್, ಚಂದ್ರಹಾಸ ಶೆಟ್ಟಿ ರಂಗೋಲಿ, ಕಿರಣ್ ಹೆಗ್ಡೆ, ಕೃಷ್ಣಯ್ಯ ಬಲ್ಲಾಳ್, ಮಾಧವ ಎಸ್.ಮಾವೆ, ಸುರೇಶ್ ಕುಲಾಲ್, ಪ್ರಭಾಕರ ಪ್ರಭು, ಸಂತೋಷ್ ಕುಮಾರ ರೈ ಬೋಳಿಯಾರ್, ಕರುಣೇಂದ್ರ ಪೂಜಾರಿ, ವಸಂತ ಮಣಿಹಳ್ಳ, ಸುಭಾಶ್ಚಂದ್ರ ಜೈನ್, ಮಚ್ಚೇಂದ್ರನಾಥ ಸಾಲ್ಯಾನ್, ಯಶವಂತ ದೇರಾಜೆ, ರಾಜೇಂದ್ರ ಜೈನ್, ಆನಂದ ಶಂಭೂರು, ಚಂದ್ರಹಾಸ ರೈ ಕಲ್ಲಡ್ಕ, ನಾಗೇಶ ಕಲ್ಲಡ್ಕ, ಬಾಲಕೃಷ್ಣ ಸೆರ್ಕಳ, ಪದ್ಮನಾಭ ಇಡ್ಕಿದು, ಎ.ಗೋವಿಂದ ಪ್ರಭು, ಪುಷ್ಪರಾಜ ಶೆಟ್ಟಿ ಮಾಣಿ, ಜನಾರ್ದನ ಬೊಂಡಾಲ, ಜಿನೇಂದ್ರ ಜೈನ್, ಯೋಜನಾಧಿಕಾರಿ ಜಯಾನಂದ ಪಿ. ಸಹಿತ ವಿವಿಧ ದೇವಸ್ಥಾನ ಮತ್ತು ದೈವಸ್ಥಾನಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಸದಾನಂದ ನಾವೂರ ಸ್ವಾಗತಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.