” ಎಲ್ಲರ ಪ್ರೀತಿಗೆ ಋಣಿಯಾಗಿದ್ದೇನೆ ” : ಹರೀಶ ಶೆಟ್ಟಿ

ಪಡುಕುಡೂರು : ಜೀವನದಲ್ಲಿ ಶ್ರಮಪಟ್ಟು ಮೇಲೆ ಬಂದಿದ್ದೇನೆ. ನಮಗೆ ಕಷ್ಟದ ಅರಿವಿದೆ, ಹಾಗಾಗಿ ಇತರರ ಕಷ್ಟ ತಿಳಿಯುತ್ತದೆ. ನನ್ನಿಂದ ಸಾಧ್ಯವಿದ್ದಷ್ಟು ನಮ್ಮೂರಿನ ಜನರ ಕಷ್ಟಕ್ಕೆ ನೆರವಾಗಬೇಕು ಎಂಬುದು ನನ್ನ ಮನದ ಹಂಬಲ, ಇದನ್ನು ನಮ್ಮ ಮಾವನವರಿಂದ ಕಲಿತ್ತಿದ್ದೇನೆ, ಜನಸೇವೆಯಿಂದ ಸಂತೃಪ್ತಿ ಇದೆ, ಜೀವನದಲ್ಲಿ ಈ ಹಂತಕ್ಕೆ ಬೆಳೆಯುತ್ತೇನೆ ಎಂದು ಕನಸಲ್ಲೂ ಎಣಿಸಿರಲಿಲ್ಲ, ಇದು ನನ್ನ ಭಾಗ್ಯ, ಪಡುಕುಡೂರಿನವರ ಒಗ್ಗಟ್ಟು ಪ್ರೀತಿ ಕಂಡು ಖುಷಿಯಾಗಿದೆ, ಎಲ್ಲರ ಪ್ರೀತಿಗೂ ಋಣಿಯಾಗಿದ್ದೇನೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಸಮಾಜಸೇವಕ ಮುಂಬಯಿ ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಭಾವನಾತ್ಮಕವಾಗಿ ಹೇಳಿದರು.
ಅವರು ಗುರುವಾರ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ವಿವಿಧ ಸಂಘಸಂಸ್ಥೆಗಳಿಂದ ನಡೆದ ಹುಟ್ಟೂರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ನನಗೆ ನನ್ನ ಮಾವನವರು ಕಲಿಸಿದ ಸಂಸ್ಕಾರಗಳು ಮುಂದೆ ಸಮಾಜಮುಖಿಯಾಗಿ ಬೆಳೆಯಲು ದಾರಿದೀಪವಾಗಿದೆ.
ನಾನೋಬ್ಬನೆ ಅಲ್ಲ, ನಮ್ಮೂರು ಪಡುಕುಡೂರಿನಲ್ಲಿ ದಾನಧರ್ಮ ಮಾಡುವ ಮಂದಿ ಹಲವರಿದ್ದಾರೆ. ತೆರೆಮರೆಯಲ್ಲಿ ದಾನಧರ್ಮ ನಡೆಯುತ್ತಲೇ ಇದೆ. ಊರಿನ ಕೆಲಸಕ್ಕಾಗಿ ಎಲ್ಲರೂ ಒಂದಾಗುತ್ತಿರುವುದು ಕಂಡು ಖುಷಿಯಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿಯವರ ಪುತ್ಥಳಿ ಲೋಕಾರ್ಪಣೆಯ ಬಳಿಕ ನಮ್ಮೂರಿನ ಹೆಸರು ರಾರಾಜಿಸುವುದು ನೋಡಿ ಅತ್ಯಂತ ಹೆಮ್ಮೆಯಾಗುತ್ತಿದೆ ಎಂದು ಹರೀಶ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹರೀಶ ಶೆಟ್ಟಿ ಅವರ ಮಾವ ಎಂ.ಡಿ.ಅಧಿಕಾರಿಯವರ ಪುತ್ಥಳಿ ಸಂಸ್ಥಾಪನೆಯ ರೂವಾರಿ ಪಡುಕುಡೂರು ಪಡುಪರ್ಕಳ ಶಂಕರ ಶೆಟ್ಟಿಯವರು ಮಾತನಾಡಿ ಕಠಿಣ ಪರಿಶ್ರಮದ ಮೂಲಕ ಜೀವನ ಸಾಧನೆ ಮಾಡಿದ ಹರೀಶ ಶೆಟ್ಟಿ ನಮ್ಮ ಕುಟುಂಬ ಹೆಮ್ಮೆಯಾಗಿದ್ದರು. ಈಗ ಊರಿನ ಹೆಮ್ಮೆ ಎಂದು ಸರ್ವರೂ ತೋರಿಸಿಕೊಟ್ಟದ್ದು ನೋಡಿದರೆ ನಮಗೆ ಹೆಮ್ಮೆಯಾಗುತ್ತದೆ, ಹರೀಶ ಶೆಟ್ಟಿ ನಮ್ಮೇಲ್ಲರ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಆಶೀರ್ವಚನ ನೀಡಿ ಊರಿನ ಒಳಿತಿಗಾಗಿ ಸೇವೆ ಮಾಡುತ್ತಿರುವ ಹರೀಶ ಶೆಟ್ಟಿ ಜೀವನದಲ್ಲಿ ಇನ್ನಷ್ಟು ಶ್ರೇಯಸ್ಸಾಗಲಿ ಎಂದು ಶುಭಹಾರೈಸಿದರು.
ಸರ್ವರಿಗೂ ಪ್ರೀತಿಯ ವ್ಯಕ್ತಿ ನಮ್ಮ ಹರೀಶಣ್ಣ, ಅವರಿಗೆ ಹುಟ್ಟೂರು ಸನ್ಮಾನ ಮಾಡಲು ಅತ್ಯಂತ ಹೆಮ್ಮೆಯಾಗುತ್ತದೆ ಎಂದು ಯುವ ಮುಂದಾಳು ಸಮಾಜಸೇವಕ ಅಶೋಕ ಎಂ ಶೆಟ್ಟಿ ಅಭಿನಂದನೆ ಸಲ್ಲಿಸಿದರು. ಹರೀಶ್ ಶೆಟ್ಟಿ ಅವರ ಗುರು ನಿವೃತ್ತ ಮುಖ್ಯ ಶಿಕ್ಷಕ ಟಿ. ಭುಜಂಗ ಶೆಟ್ಟಿ ಅವರು ಮಾತನಾಡಿ ಸೌಮ್ಯ ಸ್ವಭಾವದ ನನ್ನ ಶಿಷ್ಯ ಜಾಗತಿಕ ಮಟ್ಟದಲ್ಲಿ ಬೆಳೆದಿರುವುದು ಕಂಡು ಖುಷಿಯಾಗಿದೆ. ಹರೀಶನ ಕೀರ್ತಿ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು. ಮುನಿಯಾಲಿನ ಮುಖಂಡ ಗೋಪಿನಾಥ ಭಟ್ ಮಾತನಾಡಿ ಒಳ್ಳೇಯತನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದುಬಕ್ಕೆ ಪಡುಪರ್ಕಳ ಹರೀಶ ಶೆಟ್ಟಿಯವರು ಸಾಕ್ಷಿ, ಅವರು ನಮಗೆಲ್ಲರಿಗೂ ಹೆಮ್ಮೆ ಎಂದು ಶುಭಹಾರೈಸಿದರು. ಯುವ ಮುಖಂಡ ಪಡುಕುಡೂರು ಪ್ರಸನ್ನ ಶೆಟ್ಟಿ ಜಯಲೀಲಾ ಮಾತನಾಡಿ ನಮ್ಮೂರಿನ ಹೆಮ್ಮೆ ಯುವಕರ ಕಣ್ಮಣಿ ಯುವ ನೇತಾರ ಅವರಿಗೆ ಜಾಗತಿಕ ಮಟ್ಟದಲ್ಲಿ ದೊರೆತಿರುವ ಗೌರವ ನಮ್ಮೂರಿನ ಹೆಸರನ್ನು ಕೂಡ ಜಾಗತಿಕ ಮಟ್ಟದಲ್ಲಿ ಪಸರಿಸುವಂತೆ ಮಾಡಿದೆ, ನಮಗೆಲ್ಲರಿಗೂ ಪ್ರೋತ್ಸಾಹದ ಚಿಲುಮೆಯಾಗಿ ಮಾರ್ಗದರ್ಶಕರಾದ ಹರೀಶ ಶೆಟ್ಟಿಯವರ ಜೀವನ ಇನ್ನಷ್ಟು ಬೆಳಗಲಿ ಎಂದು ಹರ್ಷ ವ್ಯಕ್ತಪಡಿಸಿದರು.
ಮುನಿಯಾಲು ಲಯನ್ಸ್ ಕ್ಲಬ್ ಪ್ರಮುಖರಾದ ಪಡುಕುಡೂರು ಶಂಕರ ಶೆಟ್ಟಿ ಮುನಿಯಾಲು ಅಧ್ಯಕ್ಷತೆ ವಹಿಸಿ ಮಾತನಾಡಿ ಜೀವನ ಸಾಧನೆಯಲ್ಲಿ ಗಳಿಸಿದನ್ನು ಜನಸೇವೆಗೆ ಮುಡಿಪಾಗಿಡುವ ಹರೀಶ ಶೆಟ್ಟಿಯವರು ನಮ್ಮೂರಿನ ಹೆಮ್ಮೆ ಎಂದು ಶುಭಹಾರೈಸಿದರು. ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿಯವರ ಪುತ್ಥಳಿ ಮಾಲಾರ್ಪಣೆ ಮಾಡಿ ಬಳಿಕ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ದಂಪತಿ ಮತ್ತು ಗಣ್ಯರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಸಮಾಜಸೇವಕ ಮುಂಬಯಿ ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಹಾಗೂ ಅವರ ತಾಯಿ ಸುನಂದ ಶೆಟ್ಟಿ ಹಾಗೂ ಪುತ್ರಿ ಐಕ್ಯ ಶೆಟ್ಟಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ನೇತ್ರತ್ವದಲ್ಲಿ ಪಡುಕುಡೂರು ಶಾಲೆಯ ಹಳೇ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುನಿಯಾಲು ಲಯನ್ಸ್ ಕ್ಲಬ್, ಪಡುಕುಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ, ಪಡುಕುಡೂರು ಸ್ತ್ರೀಶಕ್ತಿ ಸಂಜೀವಿನಿ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಟಿ. ಭುಜಂಗ ಶೆಟ್ಟಿ, ಲಯನ್ಸ್ ಮುಖಂಡ ಮುನಿಯಾಲು ಗೋಪಿನಾಥ ಭಟ್, ಪಡುಕುಡೂರು ಅಶೋಕ್ ಎಂ ಶೆಟ್ಟಿ, ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ ಹೆಗ್ಡೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ, ಒಕ್ಕೂಟದ ಅಧ್ಯಕ್ಷ ಹೃದಯ ಕುಮಾರ್ ಶೆಟ್ಟಿ, ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹರೀಶ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯೆ ತಾರಾವತಿ ಶೆಟ್ಟಿ, ಮುನಿಯಾಲು ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ, ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಅಧ್ಯಕ್ಷ ಸಂದೀಪ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಪಡುಕುಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಚಾರ್ಯ, ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆಯ ಪ್ರವೀಣ್, ವಿವಿಧ ಸಂಘಸಂಸ್ಥೆಯ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.
ಪಡುಕುಡೂರು ಪ್ರಸನ್ನ ಶೆಟ್ಟಿ ಜಯಲೀಲಾ ಸ್ವಾಗತಿಸಿ ಶಿಕ್ಷಕ ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿ ಶಿಕ್ಷಕಿ ರಂಜಿತಾ ಪೂಜಾರಿ ಪಡುಕುಡೂರು ಸನ್ಮಾನ ಪತ್ರ ವಾಚಿಸಿದರು. ಖಜಾನೆ ಸಂದೇಶ ಶೆಟ್ಟಿ ವಂದಿಸಿದರು.
ವರದಿ : ಸುಕುಮಾರ್ ಮುನಿಯಾಲ್