“ಪಡುಪಣಂಬೂರು :ದೇಶವ್ಯಾಪಿ ನಡೆಯುತ್ತಿರುವ ಮೂರು ತಿಂಗಳ ಆರ್ಥಿಕ ಸೇರ್ಪಡೆ ಹಾಗೂ ಜನ ಸುರಕ್ಷಾ ಅಭಿಯಾನದ ಭಾಗವಾಗಿ ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ ಕಾರ್ಯಕ್ರಮವನ್ನು ಬಿಸ್ಮಯ್ ಸಮಲ್ ಜನರಲ್ ಮ್ಯಾನೇಜರ್ ಕೆನರಾ ಬ್ಯಾಂಕ್ ಪ್ರಧಾನ ಕಛೇರಿ ಬೆಂಗಳೂರು ಉದ್ಘಾಟಿಸಿ ಕಾಲಕ್ಕೆ ಸರಿಯಾಗಿ ಬ್ಯಾಂಕ್ ಉಳಿತಾಯ ಖಾತೆಯ ಕೆವೈಸಿ ನವೀಕರಿಸವುದು , ನಾಮನಿರ್ದೇಶನ ಮಾಡುವುದು ನಿರಂತರ ಬ್ಯಾಂಕ್ ಸೌಲಭ್ಯಕ್ಕೆ ಅನುಕೂಲ ಎಂದರು, ಮಂಜುನಾಥ್ ಜನರಲ್ ಮ್ಯಾನೇಜರ್ ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರು ಇವರು ಭಾಗವಹಿಸಿ ಜನ ಸುರಕ್ಷಾ ಯೋಜನೆಗಳು ಬ್ಯಾಂಕ್ ನಲ್ಲಿ ಲಭ್ಯವಿರುವ ಅನೇಕ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು.

ಈ ಮೂಲಕ ನಮ್ಮ ಜೀವನಮಟ್ಟವನ್ನು ಸುಧಾರಣೆಗೆ ಸಹಕಾರಿ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೇಮಂತ್ ಅಮಿನ್ ಪಂಚಾಯತ್ ಅಧ್ಯಕ್ಷರು ವಹಿಸಿ ಅತಿ ಕಡಿಮೆ ಬೆಲೆಯಲ್ಲಿ ಗರಿಷ್ಠ ಮಟ್ಟದ ವಿಮಾ ಸೌಲಭ್ಯ ಜನ ಸುರಕ್ಷಾ ಯೋಜನೆಗಳ ಮೂಲಕ ಜನ ಸಾಮಾನ್ಯರಿಗೆ ತಲುಪುತ್ತಿದೆ ಇಂತಹ ಯೋಜನೆಗಳ ಮಾಹಿತಿ ಹಾಗೂ ನೊಂದಣಿ ಕಾರ್ಯಕ್ರಮ ಗ್ರಾಮ ಮಟ್ಟದಲ್ಲಿ ನಡೆಸುತ್ತಿರುವ ಕೆನರಾ ಬ್ಯಾಂಕ್ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಲತಾ ಕುರುಪು ಡಿಜಿಎಂ, ಪ್ರಾದೇಶಿಕ ವ್ಯವಸ್ಥಾಪಕರು ಪ್ರಾದೇಶಿಕ ಕಛೇರಿ ಕೆನರಾ ಬ್ಯಾಂಕ್ ಮಂಗಳೂರು ಭಾಗವಹಿಸಿ ಸುರಕ್ಷಿತ ಡಿಜಿಟಲ್ ವ್ಯವಹಾರದ ಜ್ಞಾನ ಸಂಪಾದನೆ ಇಂದಿನ ಅಗತ್ಯತೆ ಎಂದರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕೃಷ್ಣ ಮೋಹನ್ ಡಿಜಿಎಂ ಪ್ರಾದೇಶಿಕ ವ್ಯವಸ್ಥಾಪಕರು ಎಸ್ ಬಿ ಐ ಪ್ರಾದೇಶಿಕ ಕಛೇರಿ ಮಂಗಳೂರು ನಾಮನಿರ್ದೇಶನ (ನಾಮಿನಿ) ಮಹತ್ವದ ಬಗ್ಗೆ ತಿಳಿಸಿದರು. ಪಂಚಾಯತ್ ಸದಸ್ಯರಾದ ವಿನೋದ್ ಸಾಲ್ಯಾನ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ಪಡೆದು ಗ್ರಾಮಸ್ಥರು ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧೀರ್ ಸುರಕ್ಷಾ ಯೋಜನೆಗಳ ಪರಿಪೂರ್ಣತೆ ಸಾಧಿಸಲು ವಿಮಾ ಗ್ರಾಮವಾಗಿ ಘೋಷಿಸಲು ಗ್ರಾಮಸ್ಥರು ಸ್ಥಳೀಯ ಆಡಳಿತ ಹಾಗೂ ಸ್ಥಳೀಯ ಬ್ಯಾಂಕ್ ಗಳ ಜೊತೆ ಸಹಕರಿಸಲು ಮನವಿ ಮಾಡಿದರು, ಕವಿತಾ ಎನ್ ಶೆಟ್ಟಿ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರು ದಕ್ಷಿಣ ಕನ್ನಡ ಜಿಲ್ಲೆ ಇವರು ಅಭಿಯಾನದ ಆಶಯ ಹಾಗೂ ಯೋಜನೆಗಳ ಮಹತ್ವದ ಬಗ್ಗೆ ತಿಳಿಸಿ ಸ್ವಾಗತಿಸಿದರು. ಲತೇಶ್ ಬಿ ಸಮಾಲೋಚಕರು ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಮಂಗಳೂರು ಇವರು ಕಾರ್ಯಕ್ರಮ ನಿರೂಪಿಸಿದರು. ಅನುಶ್ರೀ ಶಾಖಾ ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಹಳೆಯಂಗಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬ್ಬಂದಿ ವರ್ಗ, ಕೆನರಾ ಬ್ಯಾಂಕ್, ಎಸ್ ಬಿ ಐ ಸಿಬ್ಬಂದಿಗಳು,ಅಂಗನವಾಡಿ ಆಶಾ ಕಾರ್ಯಕರ್ತೆಯರು, ಸಂಜೀವಿನಿ,ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.